ADVERTISEMENT

ಲಿಂಗಾಂಬುಧಿ ಕೆರೆಯಲ್ಲಿ ಪಕ್ಷಿಗಳ ಸಾವು

ಪೆಲಿಕಾನ್ ಬಳಿಕ ನಾರ್ಥರನ್ ಶೋವೆಲರ್ ಹಕ್ಕಿಗಳ ಸಾವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 7:58 IST
Last Updated 17 ನವೆಂಬರ್ 2019, 7:58 IST
   

ಮೈಸೂರು: ನಗರದ ಹೊರವಲಯದಲ್ಲಿನ ಲಿಂಗಾಂಬುಧಿ ಕೆರೆಯಲ್ಲಿ ಆರಕ್ಕೂ ಹೆಚ್ಚು ನಾರ್ಥರನ್ ಶೋವೆಲರ್ ಹಕ್ಕಿಗಳು ಮೃತಪಟ್ಟಿದ್ದು, ಪಕ್ಷಿ ಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.

ಅಕ್ಟೋಬರ್‌ನಲ್ಲಿ ಉತ್ತರ ಭಾರತದಿಂದ ವಲಸೆ ಬರುವ ಹಕ್ಕಿಗಳು, ಈ ಭಾಗದ ಕೆರೆಗಳ ದಂಡೆಯಲ್ಲಿ ಆಸರೆ ಪಡೆದು, ಮೊಟ್ಟೆಯಿಟ್ಟು ಮರಿ ಮಾಡಿಕೊಂಡು ತಮ್ಮ ವಾಸಸ್ಥಾನಕ್ಕೆ ಮರಳುತ್ತವೆ. ಆದರೆ ಎರಡು ದಿನದಿಂದ ಒಂದೊಂದೇ ಹಕ್ಕಿಗಳು ಲಿಂಗಾಂಬುಧಿ ಕೆರೆಯಲ್ಲಿ ಮೃತಪಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

‘ವಿಷಯ ತಿಳಿದೊಡನೆ ಶನಿವಾರ ಕೆರೆಗೆ ಭೇಟಿ ನೀಡಿದ್ದೇವೆ. ಹಕ್ಕಿಗಳ ಮೃತದೇಹ ಸಂಗ್ರಹಿಸಿ, ಸಾವಿನ ಕಾರಣ ತಿಳಿದುಕೊಳ್ಳಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ’ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಪ್ರಶಾಂತ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮತ್ತಷ್ಟು ಹಕ್ಕಿಗಳು ಮೃತಪಟ್ಟಿರಬಹುದು ಎಂಬ ಅನುಮಾನದಿಂದ ನಮ್ಮ ಸಿಬ್ಬಂದಿ ದೋಣಿ ಬಳಸಿಕೊಂಡು ಕೆರೆಯಲ್ಲಿ ಶೋಧ ನಡೆಸಿದ್ದಾರೆ. ರಾಜಸ್ತಾನದಲ್ಲೂ 3 ಸಾವಿರಕ್ಕೂ ಹೆಚ್ಚು ಹಕ್ಕಿಗಳು ಮೃತಪಟ್ಟಿವೆ. ಅಲ್ಲಿನ ಅಧಿಕಾರಿಗಳೊಟ್ಟಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದೇವೆ. ಸಾವಿಗೆ ನಿಖರ ಕಾರಣ ಸಿಗಲಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲೂ ಈಚೆಗಷ್ಟೇ ಮೂರು ಪೆಲಿಕಾನ್ ಹಕ್ಕಿಗಳು ಮೃತಪಟ್ಟಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.