ಮೈಸೂರು: ‘ಅನುದಾನಿತ ಶಾಲಾ–ಕಾಲೇಜುಗಳ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಶನಿವಾರ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು’ ಎಂದು ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಡಾ.ಶಿಂಡೆನಹಳ್ಳಿ ಶರತ್‍ಕುಮಾರ್ ತಿಳಿಸಿದರು.
‘ಪ್ರಾಥಮಿಕ ಹಂತವಾಗಿ ಈಗ ರಾಜ್ಯದಾದ್ಯಂತ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಗುತ್ತಿದ್ದು, ಸರ್ಕಾರ ಕ್ರಮ ಕೈಗೊಳ್ಳದಿದ್ದರೇ ಜ.10ರಿಂದ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಮಾಡು ಇಲ್ಲವೇ ಮಡಿ ಘೋಷಣೆಯಡಿ ನಿರಂತರ ಹೋರಾಟ ನಡೆಸಲಾಗುವುದು’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
‘2006ರ ಏ.1ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಹಾಗೂ ಮೊದಲೇ ನೇಮಕಗೊಂಡು ನಂತರ ಅನುದಾನಕ್ಕೊಳಪಟ್ಟು ವೇತನ ಪಡೆಯುತ್ತಾ ಸೇವೆ ಸಲ್ಲಿಸುತ್ತಿರುವವರಿಗೆ ಹಳೆಯ ಪಿಂಚಣಿಯಾಗಲೀ, ನೂತನ ಪಿಂಚಣಿ ಯೋಜನೆಯಾಗಲೀ ಅನ್ವಯಿಸುತ್ತಿಲ್ಲ. ಈ ಎರಡರಲ್ಲಿ ಒಂದನ್ನಾದರೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯದಾದ್ಯಂತ ನಾನಾ ಹೋರಾಟಗಳನ್ನು ಮಾಡಿ ಸರ್ಕಾರದ ಗಮನ ಸೆಳೆದಿದ್ದರೂ, ಹುಸಿ ಭರವಸೆ ನೀಡಿ ನೌಕರರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಸಂಘದ ಗೌರವ ಅಧ್ಯಕ್ಷ ಜಿ.ಆರ್.ಮಹದೇವು, ಖಜಾಂಚಿ ಸಿದ್ದರಾಜು, ಡಾ.ವಿನುತಾ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.