ADVERTISEMENT

ಮೈಸೂರು: ಎನ್‌ಟಿಎಂ ಶಾಲೆ ಉಳಿಸಲು ಆಗ್ರಹಿಸಿ ಸಚಿವರಿಗೆ ಘೇರಾವ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 5:04 IST
Last Updated 17 ಜುಲೈ 2021, 5:04 IST
   

ಮೈಸೂರು: ಇಲ್ಲಿನ ಎನ್‌ಟಿಎಂ ಶಾಲೆ ಉಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ
ಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರಿಗೆ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಶುಕ್ರವಾರ ಘೇರಾವ್ ಹಾಕಿದರು.

ಇಲ್ಲಿನ ಪಾಲಿಕೆಯಲ್ಲಿ ನಿಗದಿಯಾಗಿದ್ದ ಪ್ರಗತಿಪರಿಶೀಲನಾ ಸಭೆಗೆ ತೆರಳುತ್ತಿದ್ದ ಅವರನ್ನು ಪಾಲಿಕೆಯ ಆವರಣದಲ್ಲಿ ಪ್ರತಿಭಟನಕಾರರು ತಡೆದರು. ಈ ವೇಳೆ ಸಚಿವ ಭೈರತಿ ಬಸವರಾಜು ಕಿವಿಗೊಡದೇ ನೇರ ಸಭೆಯತ್ತ ತೆರಳಿದರು. ಸಚಿವ ಸೋಮಶೇಖರ್ ಕೆಲಕಾಲ ನಿಂತು ಪ್ರತಿಭಟನಕಾರರ ಮನವಿ ಆಲಿಸಿದರು.

ಹೋರಾಟಗಾರ ಪ.ಮಲ್ಲೇಶ್ ಮಾತನಾಡಿ, ‘ಎನ್‌ಟಿಎಂ ಶಾಲೆ ಉಳಿಸಲು ಆಗ್ರಹಿಸಿ 18 ದಿನಗಳ ಕಾಲ ಪ್ರತಿಭಟನೆ ನಡೆಯುತ್ತಿದೆ. ಈ ಶಾಲೆ ದೇಶದ ಪ್ರಪ್ರಥಮ ಹೆಣ್ಣು ಮಕ್ಕಳ ಕನ್ನಡ ಶಾಲೆ. ಶಾಲೆಯನ್ನು ಉಳಿಸಿಕೊಂಡು ಸ್ಮಾರಕವೂ ನಿರ್ಮಾಣವಾಗಲಿ’ ಎಂದು ಆಗ್ರಹಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್, ‘ಶಾಲೆ ಇತಿಹಾಸ ಹಾಗೂ ಶಾಲೆ ಹೋರಾಟದ ಕುರಿತು ಯಾವುದೇ ಮಾಹಿತಿ ಇಲ್ಲ ಬೇಡಿಕೆಯನ್ನು ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿ ನಿರ್ಗಮಿಸಿದರು.

ತಮ್ಮ ಮನವಿಗೆ ಸ್ಪಂದಿಸದ ಪಾಲಿಕೆ ಸದಸ್ಯರ ವಿರುದ್ಧ ಹಾಗೂ ಸಚಿವರ ವಿರುದ್ದ ಪ್ರತಿಭಟನಕಾರರು ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ಸ್ಥಳಕ್ಕೆ ಬಂದ ಶಾಸಕ ತನ್ವೀರ್‌ಸೇಠ್ ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿ, ಶಾಲೆ ಉಳಿಯಬೇಕು ಎಂದು ಆಗ್ರಹಿಸಿದರು. ಪ.ಮಲ್ಲೇಶ್ ಅವರ ಜತೆಗೆ, ಹೋರಾಟಗಾರರಾದ ಸ.ರ.ಸುದರ್ಶನ್, ಪುರುಷೋತ್ತಮ್, ಉಗ್ರನರಸಿಂಹೇಗೌಡ, ತಾಯೂರು ವಿಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ ಹಾಗೂ ಇತರರು ಇದ್ದರು.

ಕನ್ನಡ ಶಾಲೆಯ ನಾಶ, ಕನ್ನಡಕ್ಕೆ ಬಗೆದ ದ್ರೋಹಕ್ಕೆ ಸಮ: ಕನ್ನಡದ ಉಳಿವಿಗೆ ಕಾರಣವಾಗಿರುವ ಕನ್ನಡ ಶಾಲೆಗಳನ್ನು ನಾಶಪಡಿಸುವುದು ಕನ್ನಡ ಭಾಷೆಗೆ ಬಗೆಯುವ ದ್ರೋಹ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ತಿಳಿಸಿದರು.

ಎನ್‌ಟಿಎಂ ಶಾಲೆಯ ಮುಂಭಾಗ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ಶಾಲೆಯ ಉಳಿವಿಗೆ ಒತ್ತಾಯಿಸಿದರು. ‌

ಹೋರಾಟಗಾರ ಮಡ್ಡೀಕೆರೆ ಗೋಪಾಲ್ ಮಾತನಾಡಿ, ‘ಕನ್ನಡ ಶಾಲೆಯ ಉಳಿವಿಗೆ ಆಗ್ರಹಿಸಿ 7 ವರ್ಷಗಳಿಂದ ದೊಡ್ಡ ಪ್ರಮಾಣದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಪ್ರತಿಕ್ರಿಯಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಲೆ ಉಳಿವಿಗೆ ಮನವಿ ಸಲ್ಲಿಕೆ: ಮೈಸೂರಿನ ಎನ್.ಟಿ.ಎಂ. ಶಾಲೆಯನ್ನು ಉಳಿಸಿಕೊಂಡು ವಿವೇಕ ಸ್ಮಾರಕವನ್ನು ಉಳಿದ ಜಾಗದಲ್ಲಿ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ಕಾವಲು ಪಡೆ ಆಗ್ರಹಿಸಿದೆ. ಈ ಕುರಿತು ಸಂಘಟನೆಯಪಿರಿಯಾಪಟ್ಟಣ ತಾಲ್ಲೂಕು ಘಟಕದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಚಂದ್ರಮೌಳಿ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎ.ಸುಬ್ರಹ್ಮಣ್ಯ ಮಾತನಾಡಿ, ‘ಮಹಾರಾಣಿ ಮಾದರಿ ಶಾಲೆಗೆ ಶತಮಾನದ ಇತಿಹಾಸ ಇದೆ. ಶಾಲೆ ಕೆಡವಿ ವಿವೇಕ ಸ್ಮಾರಕ ನಿರ್ಮಿಸುವುದು ಸಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.