ADVERTISEMENT

ಒಕ್ಕಲಿಗರ ಅವಹೇಳನ: ಕೆಪಿಸಿಸಿ ವಕ್ತಾರರಾಗಿದ್ದ ಜಿ.ವಿ. ಸೀತಾರಾಮು ಉಚ್ಚಾಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 22:50 IST
Last Updated 9 ಆಗಸ್ಟ್ 2025, 22:50 IST
ಜಿ.ವಿ.ಸೀತಾರಾಮು
ಜಿ.ವಿ.ಸೀತಾರಾಮು   

ಮೈಸೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಕೆಪಿಸಿಸಿ ವಕ್ತಾರರಾಗಿದ್ದ ಜಿ.ವಿ. ಸೀತಾರಾಮು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳವರೆಗೆ ಉಚ್ಚಾಟಿಸಲಾಗಿದೆ.

ಅವರು ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಡಿತ್ತು. ಅದನ್ನು ಖಂಡಿಸಿ ಸಮಾಜದವರು ಎಚ್.ಡಿ. ಕೋಟೆಯಲ್ಲಿ ಪ್ರತಿಭಟಿಸಿ ಕ್ರಮಕ್ಕೆ ಒತ್ತಾಯಿಸಿದ್ದರು. ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿದೆ. ಹೀಗಾಗಿ, ಶಿಸ್ತುಕ್ರಮ ಜರುಗಿಸುವಂತೆ ಅಲ್ಲಿನ ಎರಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಶಾಸಕ ಅನಿಲ್ ಚಿಕ್ಕಮಾದು ಕೋರಿದ್ದರು. ಅದನ್ನು ಆಧರಿಸಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.

ಅದನ್ನು ಆಧರಿಸಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಕ್ರಮ ಕೈಗೊಂಡಿದೆ. ‘ಪಕ್ಷದ ವರ್ಚಸ್ಸಿಗೆ ಹಾನಿ ಉಂಟು ಮಾಡುವ ಹೇಳಿಕೆ ನೀಡಿದ್ದರಿಂದ ಅವರನ್ನು ಉಚ್ಚಾಟಿಸಲಾಗಿದೆ’ ಎಂದು ಸಮಿತಿಯ ಸಂಚಾಲಕ ನಿವೇದಿತ್ ಆಳ್ವಾ ತಿಳಿಸಿದ್ದಾರೆ.

ADVERTISEMENT

ಸೀತಾರಾಮು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.