ADVERTISEMENT

ಶತಕದ ಗಡಿ ತಲುಪಿದ ಈರುಳ್ಳಿ ಧಾರಣೆ

ಎಲೆಕೋಸಿನ ಆವಕವೂ ಹೆಚ್ಚಳ; ಬೆಲೆಯೂ ದುಬಾರಿ

ಕೆ.ಎಸ್.ಗಿರೀಶ್
Published 28 ಅಕ್ಟೋಬರ್ 2020, 4:54 IST
Last Updated 28 ಅಕ್ಟೋಬರ್ 2020, 4:54 IST
ಮಾರುಕಟ್ಟೆಯಲ್ಲಿನ ಈರುಳ್ಳಿ
ಮಾರುಕಟ್ಟೆಯಲ್ಲಿನ ಈರುಳ್ಳಿ   

ಮೈಸೂರು: ಉತ್ತರ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಹಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಹೊಲದಲ್ಲೇ ಕೊಳೆಯುವಂತಾಗಿದೆ. ಇದರಿಂದ ಆವಕದಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಲೆ ಕೆ.ಜಿಗೆ ₹ 100ರ ಗಡಿ ತಲುಪಿದೆ.

ಮಳೆಗೂ ಮುನ್ನ, ಸೆ.14ರವರೆಗೂ ಈರುಳ್ಳಿ ರಫ್ತಾಗುತ್ತಿತ್ತು. ಇದೂ ಬೆಲೆ ಏರಿಕೆಗೆ ಒಂದು ಕಾರಣವಾಗಿತ್ತು. ಬಳಿಕ ಈರುಳ್ಳಿ ರಫ್ತಿಗೆ ನಿಷೇಧ ಹೇರಿದರೂ ಅ.9ರಂದು ಕೆಲವು ತಳಿಯ ಈರುಳ್ಳಿ ರಫ್ತಿಗೆ ಅನುಮತಿ ನೀಡುವ ಮೂಲಕ ನಿರ್ಬಂಧ ಸಡಿಲಿಸಲಾಯಿತು.

ಇದರಿಂದ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ಈ ತಿಂಗಳಿನಲ್ಲಿ ಹೆಚ್ಚಾಗಿ ಆವಕವಾಗಿಲ್ಲ. ಮೊದಲಿಗಿಂತ ಆವಕದ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹೀಗಾಗಿ, ಸಹಜವಾಗಿಯೆ ಬೆಲೆ ದುಬಾರಿಯಾಗಿದೆ.

ADVERTISEMENT

ಚಿಲ್ಲರೆ ಮಾರುಕಟ್ಟೆಗಳಲ್ಲಿ ಸಾಮಾನ್ಯ ದರ್ಜೆಯ ಈರುಳ್ಳಿ ದರವೇ ಕೆ.ಜಿಗೆ ₹ 100 ಇದೆ. ಹಾಪ್‌ಕಾಮ್ಸ್‌ನಲ್ಲಿ ಇದರ ದರ ಕೆ.ಜಿಗೆ ₹ 82ರಿಂದ ₹ 85ರವರೆಗೂ ಇದೆ.

ಈರುಳ್ಳಿ ಬೆಲೆ ಹೆಚ್ಚಳದಿಂದ ಗ್ರಾಹಕರು ಹೈರಾಣಾಗಿದ್ದಾರೆ. ನಷ್ಟದಿಂದ ಕಂಗೆಟ್ಟಿದ್ದ ಹೋಟೆಲ್ ಉದ್ಯಮ
ದವರು ಈರುಳ್ಳಿ ಬೆಲೆ ಏರಿಕೆಯಿಂದ ಮತ್ತಷ್ಟು ನಷ್ಟಕ್ಕೆ ತುತ್ತಾಗಿದ್ದಾರೆ. ಅಧಿಕ ಮಾಸದ ನಂತರ ಮದುವೆ ಮೊದಲಾದ ಶುಭ ಸಮಾರಂಭಗಳು ಆರಂಭವಾಗಿದ್ದು, ಆಯೋಜಕರು ಈರುಳ್ಳಿ ಖರೀದಿಗಾಗಿ ಪರದಾಡುವಂತಾಗಿದೆ.

ಉಳಿದಂತೆ, ಇಲ್ಲಿನ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಕ್ಯಾರೆಟ್ ಕೆ.ಜಿಗೆ ₹ 70, ದಪ್ಪಮೆಣಸಿನಕಾಯಿ ₹ 40, ಟೊಮೆಟೊ ₹ 10, ಬೀನ್ಸ್ ₹ 24, ಹೂಕೋಸು ₹ 10, ಬದನೆ ₹ 14, ಹಸಿರುಮೆಣಸಿನಕಾಯಿ ₹ 25, ಸಿಹಿ ಗುಂಬಳ ₹ 10 ಸಗಟು ಧಾರಣೆ ಇದೆ.

ಕೋಳಿಮೊಟ್ಟೆ ದರವು ₹ 5ರಿಂದ ಕೆಳಗೆ ಇಳಿದಿಲ್ಲ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 5.27ನ್ನು ಮಂಗಳವಾರ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.