ADVERTISEMENT

ಜಯದೇವ: ಶಸ್ತ್ರಚಿಕಿತ್ಸೆ ಇಲ್ಲದೆ ಕವಾಟ ಅಳವಡಿಕೆ -ಡಾ.ಸಿ.ಎನ್. ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 16:10 IST
Last Updated 23 ಜೂನ್ 2022, 16:10 IST
ಮೈಸೂರಿನ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯಲ್ಲಿ ಕವಾಟ ಅಳವಡಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಯನ್ನು ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು
ಮೈಸೂರಿನ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯಲ್ಲಿ ಕವಾಟ ಅಳವಡಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಯನ್ನು ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು   

ಮೈಸೂರು: ‘ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ನಾಲ್ವರು ರೋಗಿಗಳಿಗೆ ತೆರೆದ ಹೃದಯ ಚಿಕಿತ್ಸೆ ಇಲ್ಲದೆ ಕವಾಟವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ’ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಕವಾಟ ಅಳವಡಿಕೆ ಶಸ್ತ್ರಚಿಕಿತ್ಸೆಯನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಹೃದಯದ ಎಡ ಭಾಗದಲ್ಲಿರುವ ಅಯೋರ್ಟಿಕ್‌ನಲ್ಲಿ ಕಿರಿದಾದ ಕವಾಟ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ (ಅಯೋರ್ಟಿಕ್ ಸ್ಟೆನೋಸಿಸ್) ತೆರೆದ ಹೃದಯಚಿಕಿತ್ಸೆ ಮೂಲಕ ಕವಾಟ ಬದಲಾಯಿಸಲಾಗುತ್ತದೆ. 65 ವರ್ಷ ವಯಸ್ಸಾದವರಲ್ಲಿ ಇತ್ತೀಚಿನ ದಿನಗಳಲ್ಲಿ ತೆರೆದ ಹೃದಯ ಚಿಕಿತ್ಸೆ ಇಲ್ಲದೇ ಆಂಜಿಯೋಗ್ರಾಂ ತಂತ್ರಜ್ಞಾನ ಅಳವಡಿಸಿ ಕಾಲಿನ ರಕ್ತನಾಳದ ಮೂಲಕ ಈ ಕೃತಕ ಕವಾಟವನ್ನು ಜೋಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ. ಶ್ರೀನಿವಾಸ್, ಪ್ರಾಧ್ಯಾಪಕರಾದ ಡಾ.ಎಚ್‌.ಕೆ. ಶ್ರೀನಿವಾಸ್ ನೇತೃತ್ವದ ತಂಡ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದೆ. ನಾಲ್ವರೂ ಗುಣಮುಖರಾಗಿದ್ದು 2 ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ’ ಎಂದು ಹೇಳಿದರು.

‘ಈ ಶಸ್ತ್ರಚಿಕಿತ್ಸೆಗೆ ಸಾಮಾನ್ಯವಾಗಿ ಪ್ರತಿ ರೋಗಿಗೆ ಸರಾಸರಿ ₹ 20 ಲಕ್ಷ ಆಗುತ್ತದೆ. ಶೇ 50ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗಿದೆ. ಒಬ್ಬ ಬಡ ರೋಗಿಗೆ ಉಚಿತವಾಗಿ ಒದಗಿಸಲಾಗಿದೆ. ಒಂದೇ ದಿನದಲ್ಲಿ ನಾಲ್ವರಿಗೆ ಕವಾಟ ಬದಲಾವಣೆ ಮಾಡಿರುವುದು ದಾಖಲೆಯಾಗಿದೆ’ ಎಂದರು.

ಇದೇ ವೇಳೆ 4ನೇ ಹೊಸ ಆಪರೇಷನ್ ಥಿಯೇಟರ್‌ಗೂ ಚಾಲನೆ ನೀಡಿದರು.

ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಸದಾನಂದ, ಡಾ.ಅನಸೂಯಾ ಮಂಜುನಾಥ್, ಡಾ.ಹರ್ಷ ಬಸಪ್ಪ, ಡಾ.ಸಂತೋಷ್, ಡಾ.ರಾಜಿತ್, ಡಾ.ಜಯಪ್ರಕಾಶ್, ಡಾ.ವೀಣಾ ನಂಜಪ್ಪ, ಡಾ.ಭಾರತಿ, ಡಾ.ದಿನೇಶ್, ಡಾ.ಶ್ರೀನಿಧಿ ಹೆಗ್ಗಡೆ, ಡಾ.ರಶ್ಮಿ, ಡಾ.ದೇವರಾಜ್, ಆರ್‌ಎಂಒ ಡಾ.ಪಶುಪತಿ, ನರ್ಸಿಂಗ್ ಸೂಪರಿಂಟೆಂಡೆಂಟ್‌ ಹರೀಶ್‌ಕುಮಾರ್, ಪಿಆರ್‌ಒ ವಾಣಿ ಮೋಹನ್, ಗುರುಮೂರ್ತಿ, ಯೋಗಲಕ್ಷ್ಮಿ, ಎಂಜಿನಿಯರ್‌ ಸ್ವರೂಪ್, ವಿಜಯ್, ಅನುಜಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.