ADVERTISEMENT

ಮೈಸೂರು: ಹೂಗಳಲ್ಲಿ ‘ಆಪರೇಷನ್ ಸಿಂಧೂರ’

ಗಾಂಧಿ ಮಂಟಪ, ಪಂಚ ಗ್ಯಾರಂಟಿ ಕಲಾಕೃತಿಗಳು

ಎಂ.ಮಹೇಶ್
Published 21 ಸೆಪ್ಟೆಂಬರ್ 2025, 4:49 IST
Last Updated 21 ಸೆಪ್ಟೆಂಬರ್ 2025, 4:49 IST
ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿರುವ ಕುಪ್ಪಣ್ಣ ಉದ್ಯಾನ (ಸಂಗ್ರಹ ಚಿತ್ರ)
ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿರುವ ಕುಪ್ಪಣ್ಣ ಉದ್ಯಾನ (ಸಂಗ್ರಹ ಚಿತ್ರ)   

ಮೈಸೂರು: ದೇಶದ ಸೈನಿಕರ ಶಕ್ತಿ, ಸ್ಥೈರ್ಯವನ್ನು ಜಾಗತಿಕವಾಗಿ ಬಿಂಬಿಸಿದ ‘ಸಿಂಧೂರ’ ಕಾರ್ಯಾಚರಣೆಯ ಪರಿಕಲ್ಪನೆಯನ್ನು ಹೂವುಗಳಲ್ಲಿ ಕಟ್ಟಿಕೊಡಲು ಸಿದ್ಧತೆ ನಡೆದಿದೆ.

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ, ಹಾರ್ಡಿಂಗ್‌ ವೃತ್ತದ ಕುಪ್ಪಣ್ಣ (ಕರ್ಜನ್‌) ಉದ್ಯಾನದಲ್ಲಿ ನಡೆಯುವ ಫಲ–ಪುಷ್ಪ ಪ್ರದರ್ಶನದಲ್ಲಿ ಆಪರೇಷನ್‌ ಸಿಂಧೂರ ಗಮನಸೆಳೆಯಲಿದೆ. ಶತ್ರುರಾಷ್ಟ್ರದ ವಿರುದ್ಧ ದಿಟ್ಟತನದಿಂದ ಹೋರಾಡಿ ದೇಶಕ್ಕೆ ಕೀರ್ತಿ ತಂದವರಿಗೆ ಗೌರವ ಸಲ್ಲಿಸುವ ಭಾಗವಾಗಿ ಈ ಪ್ರಯತ್ನ ನಡೆದಿದೆ. ಪ್ರಾತಿನಿಧಿಕವಾಗಿ ಕರ್ನಲ್‌ ಸೋಫಿಯಾ ಹಾಗೂ ವ್ಯೋಮಿಕಾ ಸಿಂಗ್‌ ಅವರಿಗೆ ಕೃತಜ್ಞತೆ ಹೇಳುವುದಕ್ಕಾಗಿ ಪುಷ್ಪಗಳಿಂದ ಅವರ ಪ್ರತಿಕೃತಿಗಳನ್ನು ಸಿಂಗರಿಸಲಾಗುತ್ತಿದೆ. ಆರ್ಮಿ ಟ್ರಕ್, ಏರ್‌ಜೆಟ್ ಹಾಗೂ ಯುದ್ಧ ನೌಕೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಗುಲಾಬಿ, ಸೇವಂತಿಗೆ ಮೊದಲಾದ ಹೂವುಗಳನ್ನು ಬಳಸಲಾಗುತ್ತಿದೆ.

ದಸರಾ ಉದ್ಘಾಟನೆಯ ದಿನದಂದೇ ಅಂದರೆ ಸೆ.22ರಂದೇ ಫಲಪುಷ್ಪಗಳ ವಿಶಿಷ್ಟ ಲೋಕವೂ ತೆರೆದುಕೊಳ್ಳಲಿದೆ. ನಿತ್ಯವೂ 40ಸಾವಿರದಿಂದ 50ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ADVERTISEMENT

ಈ ಬಾರಿ ವಿಜಯದಶಮಿ ಮೆರವಣಿಗೆಯು ಗಾಂಧಿ ಜಯಂತಿ ದಿನವಾದ ಅ.2ರಂದು ನಡೆಯಲಿದೆ. ಈ ಕಾರಣದಿಂದ ರಾಷ್ಟ್ರಪಿತನಿಗೆ ನಮಿಸುವ ಪರಿಕಲ್ಪನೆಯ ಹೂವುಗಳ ಕಲಾಕೃತಿಯ ಘಮ ಹರಡಲಿದೆ. ಕನ್ಯಾಕುಮಾರಿಯಲ್ಲಿರುವ ಗಾಂಧೀಜಿ ಸ್ಮಾರಕ ಮ್ಯೂಸಿಯಂ (ಮಹಾತ್ಮ ಗಾಂಧಿ ಮಂಟಪ)ವನ್ನು ಮೂರು ಲಕ್ಷ ಗುಲಾಬಿ ಹೂವುಗಳಿಂದ ಗಾಜಿನ ಮನೆಯಲ್ಲಿ ನಿರ್ಮಿಸಲಾಗುತ್ತಿದೆ. ಇದು ಈ ವರ್ಷದ ಮುಖ್ಯ ಪರಿಕಲ್ಪನೆಯಾಗಿದೆ.

ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾಗಿರುವ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಬಿಂಬಿಸುವುದಕ್ಕಾಗಿಯೂ ಫಲಪುಷ್ಪಗಳನ್ನು ಬಳಸಿಕೊಳ್ಳಲಾಗುತ್ತಿದೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಮಾದರಿಗಳ ಬಗ್ಗೆ ತಿಳಿಸಿಕೊಡುವ ಕಲಾಕೃತಿಗಳಿಗೆ ಕಲಾವಿದರು ವಿವಿಧ ಹೂವುಗಳಿಂದ ‘ಜೀವ’ ನೀಡಲಿದ್ದಾರೆ.

ಉಳಿದಂತೆ, ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬಾರಿ ಹೊತ್ತ ಆನೆ, ನವದುರ್ಗೆಯರು, ಭೂಮಿಯನ್ನು ರಕ್ಷಿಸಿ ಎಂದು ಸಾರುವ ಸಂದೇಶ, ತಂಡಿ ಸಡಕ್ ಹಾಗೂ ಮಕ್ಕಳ ಉದ್ಯಾನ ಇರಲಿದೆ.

ಇಲಾಖೆಯ ವತಿಯಿಂದ 60ಸಾವಿರ ಹೂವಿನ ಸಸಿಗಳನ್ನು ಬೆಳೆಸಿದ್ದು, ಅವುಗಳನ್ನು ಬಳಸಿ, ಆಕರ್ಷಕವಾಗಿ ಜೋಡಿಸಿ ಇಡೀ ಉದ್ಯಾನವನ್ನು ಅಲಂಕರಿಸಲಾಗುವುದು. ನಿಶಾದ್‌ಬಾಗ್‌ ಎಂದೂ ಕರೆಯುವ ಈ ಉದ್ಯಾನ 10 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ಇಲಾಖೆಯ ಯೋಜನೆಗಳನ್ನು ತಿಳಿಸುವ, ಸಾವಯವ ಕೃಷಿಗೆ ಸಂಬಂಧಿಸಿದ ಹಾಗೂ ಕೃಷಿ ಮಳಿಗೆಗಳನ್ನು ಕೂಡ ತೆರೆಯಲಾಗುತ್ತಿದೆ. ಆಹಾರ ಪದಾರ್ಥಗಳ ಮಳಿಗೆಯೂ ಇರಲಿದೆ. ತೋಟಗಾರಿಕೆ ಇಲಾಖೆಯಿಂದ ಸಸ್ಯ ಸಂತೆ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಮಾರಾಟಕ್ಕೆ ಇಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.