ADVERTISEMENT

ಭೂ–ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ವಿರೋಧ ಪಕ್ಷಗಳು ಬಾಯಿ ಬಿಡಲಿ: ರೈತ ಸಂಘ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 8:09 IST
Last Updated 18 ಜೂನ್ 2020, 8:09 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಮೈಸೂರು: ಭೂ–ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ವಿರೋಧ ಪಕ್ಷಗಳ ನಾಯಕರು ಬಾಯಿ ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹಿಸಿದೆ.

ರಾಜ್ಯ ಸರ್ಕಾರವು ತಿದ್ದುಪಡಿ ತರಲು ಹೊರಟಿರುವ ಭೂ–ಸುಧಾರಣಾ ಕಾಯ್ದೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ‘ಮಣ್ಣಿನ ಮಗ’ನಾದ ಎಚ್‌.ಡಿ.ದೇವೇಗೌಡ, ‘ಮಣ್ಣಿನ ಮೊಮ್ಮಕ್ಕಳಾದ’ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ತುಟಿ ಬಿಚ್ಚಿಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾದರೂ ಬೀದಿಗಿಳಿದು ಹೋರಾಟ ನಡೆಸಿಲ್ಲ. ಆಡಳಿತ ಹಾಗೂ ವಿರೋಧ ಪಕ್ಷಗಳು ಒಳ–ಒಪ್ಪಂದ ಮಾಡಿಕೊಂಡು ಈ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಹೀಗಾಗಿ, ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆಗ್ರಹಿಸಿದರು.

‘ಸಾಮಾಜಿಕ ನ್ಯಾಯದ ಪರ’ ಎಂದು ಹೇಳುವ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹಾಗೂ ‘ದೇವರಾಜ ಅರಸು ಕಟ್ಟಾ ಅಭಿಮಾನಿ’ ಎನ್ನುವ ಬಿಜೆಪಿ ಮುಖಂಡ ಅಡಗೂರು ಎಚ್‌.ವಿಶ್ವನಾಥ್‌ ಅವರು ಈ ಕಾಯ್ದೆ ಬಗ್ಗೆ ಮಾತನಾಡದಿರುವುದು ವಿಷಾದದ ಸಂಗತಿ. ಅವರು ಕೂಡಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

20ರಂದು ವೆಬಿನಾರ್‌ ಸಂವಾದ: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಆಶ್ರಯದಲ್ಲಿ ಭೂ–ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್‌ ಕಾಯ್ದೆ ತಿದ್ದುಪಡಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಹೋರಾಟಗಾರರಿಗೆ ಅರಿವು ಮೂಡಿಸಲು ವೆಬ್‌ ಮೂಲಕ ಸಂವಾದವನ್ನು (ವೆಬಿನಾರ್‌) ಜೂನ್‌ 20ರಂದು ಹಮ್ಮಿಕೊಳ್ಳಲಾಗಿದೆ.

ಮಾಜಿ ಅಡ್ವೊಕೇಟ್‌ ಜನರಲ್ ಪ್ರೊ.ರವಿವರ್ಮ ಕುಮಾರ್‌, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌, ಚಿಂತಕರಾದ ಶಿವಸುಂದರ್‌, ಜಿ.ಸಿ.ಬೈರಾರೆಡ್ಡಿ, ಡಾ.ಸಿದ್ದನಗೌಡ ಪಾಟೀಲ ಅವರು ವಿವಿಧ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರಾದ ಎಂ.ಎಸ್‌.ಅಶ್ವತ್ಥನಾರಾಯಣರಾಜೇ ಅರಸ್‌, ಎಚ್‌.ಸಿ.ಲೋಕೇಶ್‌ ರಾಜೇ ಅರಸ್‌, ಹೊಸಕೋಟೆ ಬಸವರಾಜು, ನೇತ್ರಾವತಿ, ಚಂದ್ರೇಗೌಡ, ಹೊಸೂರ್‌ ಕುಮಾರ್‌ ಇದ್ದರು.

21ರಿಂದ ಶಾಸಕರ ಕಚೇರಿ ಎದುರು ಧರಣಿ

ಈ ಕಾಯ್ದೆ ತಿದ್ದುಪಡಿ ವಿರೋಧ ಧ್ವನಿ ಎತ್ತಬೇಕು ಹಾಗೂ ಹೋರಾಟ ನಡೆಸಬೇಕು ಎಂದು ಆಗ್ರಹಿಸಿ ರಾಜ್ಯದ ಗ್ರಾಮೀಣ ಪ್ರದೇಶದ 176 ಶಾಸಕರ ಕಚೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಜೂನ್‌ 21ರಿಂದ 24ರವರೆಗೆ ಬೆಳಿಗ್ಗೆ 11ಕ್ಕೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಬಿ.ಎಸ್‌.ಯಡಿಯೂರಪ್ಪ ಈಗ ರೈತನ ಮಗ ಅಲ್ಲ. ಅವರು ಕಾರ್ಪೊರೇಟ್‌ ಕಂಪನಿಗಳ ಸಾಕು ಮಗ.
–ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.