ADVERTISEMENT

ಹುಣಸೂರು|20 ಎಕರೆಯಲ್ಲಿ ₹20 ಲಕ್ಷ ಆದಾಯ ಗಳಿಸುತ್ತಿರುವ ಪ್ರಗತಿಪರ ರೈತ ಮಲ್ಲರಾಜೇ

ನಾಲ್ಕು ಹಂತದ ಪದ್ಧತಿಯನ್ನು ಅಳವಡಿಸಿಕೊಂಡ ಕೃಷಿಕ ಮಲ್ಲರಾಜೇ ಅರಸು

ಎಚ್.ಎಸ್.ಸಚ್ಚಿತ್
Published 15 ಜುಲೈ 2025, 4:11 IST
Last Updated 15 ಜುಲೈ 2025, 4:11 IST
<div class="paragraphs"><p>ಹುಣಸೂರು ತಾಲ್ಲೂಕಿನ ದೇವಗಳ್ಳಿ ಗ್ರಾಮದ ಪ್ರಗತಿಪರ ರೈತ ಮಲ್ಲರಾಜೇ ಅರಸು ತಮ್ಮ ತೋಟದಲ್ಲಿ ಬೆಳೆಸಿರುವ ಅರೇಬಿಕಾ ಕಾಫಿ ಹಣ್ಣು ಕಠಾವಿನಲ್ಲಿ ತೊಡಗಿರುವುದು</p></div>

ಹುಣಸೂರು ತಾಲ್ಲೂಕಿನ ದೇವಗಳ್ಳಿ ಗ್ರಾಮದ ಪ್ರಗತಿಪರ ರೈತ ಮಲ್ಲರಾಜೇ ಅರಸು ತಮ್ಮ ತೋಟದಲ್ಲಿ ಬೆಳೆಸಿರುವ ಅರೇಬಿಕಾ ಕಾಫಿ ಹಣ್ಣು ಕಠಾವಿನಲ್ಲಿ ತೊಡಗಿರುವುದು

   

ಹುಣಸೂರು: ಆರ್ಥಿಕ ಸ್ವಾವಲಂಬನೆಗೆ ತೋಟಗಾರಿಕೆ ಬೇಸಾಯಕ್ಕೆ ಒಲವು ತೋರಿದ ವಿಜ್ಞಾನ ಪದವೀಧರ ಮಲ್ಲರಾಜೇ ಅರಸು ತಮ್ಮ 20 ಎಕರೆ ತೋಟದಲ್ಲಿ ನಾಲ್ಕು ಹಂತಗಳಲ್ಲಿ ಸಮಗ್ರ ತೋಟಗಾರಿಕೆ ಬೇಸಾಯ ನಡೆಸಿ ವಾರ್ಷಿಕ ₹ 20-25 ಲಕ್ಷ ಗಳಿಸಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಗೆ ಸೇರಿದ ಮಲ್ಲರಾಜೇ ಅರಸು 25 ವರ್ಷಗಳ ಹಿಂದೆ ಹುಣಸೂರು ತಾಲ್ಲೂಕಿನ ಗಡಿ ಭಾಗ ದೇವಗಳ್ಳಿ ಗ್ರಾಮದಲ್ಲಿ 20 ಎಕರೆ ಭೂಮಿ ಖರೀದಿಸಿ ಹಂತ ಹಂತವಾಗಿ ತೋಟಗಾರಿಕೆ ಬೇಸಾಯಕ್ಕೆ ಮುಂದಾದರು. ಆರಂಭದಲ್ಲಿ 500 ತೆಂಗಿನ ಸಸಿ ನೆಟ್ಟು ಬೆಳೆಸಿದರು. ಕ್ರಮೇಣ 150ಕ್ಕೂ ಹೆಚ್ಚು ಮರಗಳಿಗೆ ಕಪ್ಪು ತಲೆ ಹುಳು ಬಾಧೆ, ಕಾಂಡ ಸೋರುವಿಕೆ ರೋಗ ಕಾಣಿಸಿಕೊಂಡು ನಾಶವಾದವು. ಆದರೂ ಧೃತಿಗೆಡದೆ ತೆಂಗಿನ ಮರ ತೆರವುಗೊಳಿಸಿ ಆ ಸ್ಥಳಕ್ಕೆ ಪರ್ಯಾಯವಾಗಿ ಸಪೋಟ ಸಸಿ ಬೆಳೆಸುವ ತೀರ್ಮಾನ ಕೈಗೊಂಡು ಈಗ ಅಲ್ಲಿ 80 ಗಿಡಗಳು ತಲೆ ಎತ್ತಿವೆ.

ADVERTISEMENT

‘ಸಂಪೂರ್ಣ ಸಾವಯವ ಬೇಸಾಯ ಮಾಡುವ ಉದ್ದೇಶ ಇತ್ತಾದರೂ, ಕೆಲವೊಂದು ರಾಸಾಯನಿಕ ಕೊರತೆ ನೀಗಿಸಲು ರಸಗೊಬ್ಬರದ ಮೊರೆ ಹೋಗಬೇಕಾಗುವುದು. ವರ್ಷಕ್ಕೆ ಒಮ್ಮೆ ಯೂರಿಯಾ, ಪೊಟ್ಯಾಶ್‌ ಮತ್ತು ಸೂಪರ್‌ ಗೊಬ್ಬರಗಳನ್ನು ಅಡಿಕೆ, ತೆಂಗು ಮತ್ತು ಕಾಫಿ ಬೆಳೆಗೆ ನೀಡುತ್ತೇನೆ. ಇದರೊಂದಿಗೆ ವಾರ್ಷಿಕ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ ನೀಡುವುದರಿಂದ ತೋಟ ರೋಗಮುಕ್ತ ಹಾಗೂ ಸದಾಕಾಲ ಹಸಿರಾಗಿಡಲು ಸಹಕಾರಿಯಾಗಿದೆ’ ಎಂದು ಮಲ್ಲರಾಜೇ ಅರಸು ‘ಪ್ರಜಾವಾಣಿ’ಗೆ ತಿಳಿಸಿದರು.

ಜೀವಾಮೃತ: ಅರಸು ಅವರು ಸಾವಯವ ಬೇಸಾಯಕ್ಕೆ ಪೂರಕವಾದ ನಾಟಿ ತಳಿ ಹಸು ಸಾಕಾಣಿಕೆ ಮಾಡಿದ್ದು, ಹಳ್ಳಿಕಾರ್‌, ಬರಗೂರು ತಳಿಗೆ ಸೇರಿದ 8 ಜೊತೆ ಹಸು ಸಾಕ್ಕಿದ್ದಾರೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡದ ಇವರು, ನಾಟಿ ತಳಿಯಿಂದ ಬರುವ ಗಂಜಲ ಮತ್ತು ಸಗಣಿಯನ್ನು ಸಂಸ್ಕರಿಸಿ ಜೀವಾಮೃತ ಸಿದ್ದಪಡಿಸಿ ಪ್ರತಿಯೊಂದು ಮರಕ್ಕೆ 10ರಿಂದ 12 ಲೀಟರ್ ನೀಡುವ ಪದ್ಧತಿ ಅಳವಡಿಸಿಕೊಂಡಿದ್ದಾರೆ.

‘ನಾಟಿ ತಳಿ ಹಾಲಿಗೆ ಬಹಳ ಬೇಡಿಕೆ ಇದ್ದು, ನಿತ್ಯ 4 ಲೀಟರ್ ಹಾಲು ಮಾರಾಟ ಮಾಡುತ್ತೇನೆ. ಇದರಿಂದ ಬರುವ ಹಣ ನಿತ್ಯ ಖರ್ಚಿಗೆ ಬಳಕೆಯಾಗುತ್ತಿದೆ’ ಎಂದು ತಿಳಿಸಿದರು.

ಆರ್ಥಿಕ ಶಕ್ತಿ: ‘300 ಕ್ವಿಂಟಲ್‌ ಅಡಿಕೆ ಬಂದಿದ್ದು, ಪ್ರತಿ ಕ್ವಿಂಟಲ್‌ಗೆ ₹60,000ದಂತೆ, 20 ಕ್ವಿಂಟಲ್‌ ಕಾಳು ಮೆಣಸು ಬಂದಿದ್ದು, ₹9 ಲಕ್ಷ, ತೆಂಗಿನಕಾಯಿ, ಕಾಫಿ ಹಾಗೂ ಸಪೋಟ ಈ ಎಲ್ಲಕ್ಕೂ ಉತ್ತಮ ದರ ಸಿಕ್ಕಿದ್ದು, 2023- 24ನೇ ಸಾಲಿನಲ್ಲಿ ತೋಟಗಾರಿಕೆಯಿಂದ ₹ 20 ಲಕ್ಷ ಬಂದಿದೆ. ಸಂಪಾದಿಸಿದ ಹಣದಲ್ಲಿ ಅರ್ಧದಷ್ಟು ಹಣ ತೋಟ ನಿರ್ವಹಣೆಗೆ ಬೇಕಾಗುತ್ತದೆ’ ಎಂದರು.

ಮಲ್ಲರಾಜೇ ಅರಸು ತಮ್ಮ ತೋಟದಲ್ಲಿ ಬೆಳೆಸಿರುವ ಕಾಳು ಮೆಣಸು
ಮಲ್ಲರಾಜೇ ಅರಸು
ತೋಟಗಾರಿಕೆ ಬೇಸಾಯವನ್ನು ವೈಜ್ಞಾನಿಕವಾಗಿ ಮಾಡುವುದರಿಂದ ನಷ್ಟ ಇರುವುದಿಲ್ಲ ನಾಲ್ಕು ಪದರದ ಲೆಕ್ಕಾಚಾರದಲ್ಲಿ ವಿವಿಧ ಬೆಳೆ ಮಾಡುವುದರಿಂದ ನಿತ್ಯ ಹಣ ಕಾಣಬಹುದು ಏಕ ಪದ್ದತಿ ರೈತರಿಗೆ ಲಾಭದಾಯಕವಲ್ಲ
ಮಲ್ಲರಾಜ ಅರಸು ಪ್ರಗತಿಪರ ರೈತ
ತೋಟಗಾರಿಕೆ ಬೇಸಾಯ ಮಾಡುವ ಪ್ರಗತಿಪರ ರೈತರಿಗೆ ಇಲಾಖೆ ಹನಿ ನೀರಾವರಿ ತೆಂಗು ಬೇಸಾಯಕ್ಕೆ ಆರ್ಥಿಕ ಸಹಾಯ ಸೇರಿದಂತೆ ಹಲವು ಯೋಜನೆಗಳಿದ್ದು ರೈತರು ಬಳಸಿಕೊಂಡಲ್ಲಿ ಸ್ವಾಭಿಮಾನದ ಬದುಕು ನಡೆಸಬಹುದು
ನಾಗರಾಜ್‌ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ನಾಲ್ಕು ಹಂತದಲ್ಲಿ ಬೇಸಾಯ ಅರಸು ಮೂಲತಃ ವಿಜ್ಞಾನ ವಿದ್ಯಾರ್ಥಿಯಾಗಿದ್ದು ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ದೃಷ್ಟಿಯಲ್ಲೇ ಗಮನಿಸಿ ನಾಲ್ಕು ಹಂತದಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. 20 ಎಕರೆಯಲ್ಲೂ 350 ತೆಂಗಿನ ಮರಗಳು ಇದ್ದು 5 ಎಕರೆಯಲ್ಲಿ ಅಡಿಕೆ 4 ಎಕೆರೆಯಲ್ಲಿ ಸಪೋಟ ಹಾಗೂ 2 ಎಕರೆಯಲ್ಲಿ ಕಾಫಿ ಬೆಳೆದಿದ್ದಾರೆ. 2000 ಅಡಿಕೆ 80 ಸಪೋಟ ಅರೇಬಿಕಾ ಹಾಗೂ ಚಂದ್ರತಳಿ ಕಾಫಿ ಹಾಗೂ 400 ಸಿಲ್ವರ್‌ ಮರದಲ್ಲಿ ಪಣಿಯೂರು 2 ತಳಿ ಕಾಳುಮೆಣಸು ಬೆಳೆಸಿರುವ ಇವರು ಸಾವಯವ ಹಸಿರು ಗೊಬ್ಬರ ಬೇಸಾಯಕ್ಕೆ ಆದ್ಯತೆ ನೀಡಿ ಅಗತ್ಯಕ್ಕೆ ಬೇಕಾದಷ್ಟು ರಾಸಾಯನಿಕ ಗೊಬ್ಬರ ಬಳಸುವ ಪದ್ಧತಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.