ADVERTISEMENT

ಮೈಸೂರು | ವ್ಯಾಯಾಮ ಶಾಲೆ ತೆರೆಯಲು ಅನುಮತಿಗಾಗಿ ಒತ್ತಾಯ

ವಿಷ ಕುಡಿಯುವುದೊಂದೇ ದಾರಿ– ಜಿಮ್ ಮಾಲೀಕರ ಅಳಲು

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 9:29 IST
Last Updated 24 ಜುಲೈ 2020, 9:29 IST

ಮೈಸೂರು: ವ್ಯಾಯಾಮ ಶಾಲೆ ತೆರೆಯಲು ಸರ್ಕಾರ ಮಾರ್ಗಸೂಚಿ ಪ್ರಕಟಿಸಿ, ಅನುಮತಿ ನೀಡಬೇಕು ಎಂದು ಅಂತರ ಜಿಲ್ಲಾ ಜಿಮ್ ಮಾಲೀಕರ ಸಂಘದ ಗೌರವ ಅಧ್ಯಕ್ಷ ಕೆ.ವಿಶ್ವನಾಥ್ ಒತ್ತಾಯಿಸಿದರು.

‘ಒಂದು ವೇಳೆ ಸರ್ಕಾರ ಇದೇ ಧೋರಣೆ ಅನುಸರಿಸಿದರೆ ನಮಗೆ ವಿಷ ಕುಡಿಯುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.

‘ಒಂದು ಬಸ್‌ಗಿಂತಲೂ ನಮ್ಮ ವ್ಯಾಯಾಮ ಶಾಲೆ ದೊಡ್ಡದು. ಒಂದು ಗಂಟೆಗೆ ಕನಿಷ್ಠ 5 ಮಂದಿಗೆ ಅವಕಾಶ ನೀಡಿದರೆ, ನಾವೂ ಸ್ಯಾನಿಟೈಸರ್ ಬಳಸಿ, ಪರಸ್ಪರ ಅಂತರ ಕಾಪಾಡಿಕೊಂಡು ವ್ಯಾಯಾಮ ಶಾಲೆ ಆರಂಭಿಸಬಹುದು. ಜಿಲ್ಲಾಡಳಿತ ಈ ಕುರಿತು ಚಿಂತನೆ ನಡೆಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಕಳೆದ 4 ತಿಂಗಳುಗಳಿಂದ ನಮ್ಮ ವ್ಯಾಯಾಮ ಶಾಲೆ ಬಂದ್ ಆಗಿದೆ. ಬಾಡಿಗೆ ಹಣ ಕಟ್ಟಲಾಗದೇ ಪರದಾಡುತ್ತಿದ್ದೇವೆ. ಮುಚ್ಚಿಬಿಡೋಣ ಎಂದರೆ ವ್ಯಾಯಾಮ ಶಾಲೆಯ ಪರಿಕರಗಳನ್ನು ಇಡುವುದಕ್ಕೆ ವ್ಯವಸ್ಥೆ ಇಲ್ಲ. ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆಗಳತ್ತಲೂ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಮದ್ಯ‍ ಮಾರಾಟಕ್ಕೆ ನಿರ್ಬಂಧ ಇಲ್ಲ, ಹೋಟೆಲ್‌ಗಳಿಗೆ, ಮಾರುಕಟ್ಟೆಗಳಿಗೆ ಜನರು ಹೋಗಬಹುದು. ಆದರೆ, ವ್ಯಾಯಾಮ ಶಾಲೆಗೆ ಬರಬಾರದು ಎಂದರೆ ಹೇಗೆ. ವ್ಯಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಿಲ್ಲವೇ ಎಂದು ಅವರು ‍ಪ್ರಶ್ನಿಸಿದರು.

ಸಂಘದ ಅಧ್ಯಕ್ಷ ಅವಿನಾಶ್ ಮಾತನಾಡಿ, ‘ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ಕ್ಷೇತ್ರದವರಿಗೂ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಿದೆ. ಸದ್ಯ, ನಮಗೆ ಜಿಮ್ ತೆರೆಯಲು ಅನುಮತಿ ನೀಡಿದರೆ ಸಾಕು. ಸರ್ಕಾರ ವಿಧಿಸುವ ಎಲ್ಲ ಷರತ್ತುಗಳನ್ನು ಒಪ್ಪುತ್ತೇವೆ. ಇನ್ನು ನಮ್ಮಿಂದ ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.

ಸಂಘದ ಖಜಾಂಚಿ ನಿತೀಶ್ ಮಾತನಾಡಿ, ‘ಮಾಸ್ಕ್ ಹಾಕಿಕೊಂಡು ಮಾಡುವಂತಹ ವ್ಯಾಯಾಮಗಳು ಸಾಕಷ್ಟಿವೆ. ಇಂತಹ ವ್ಯಾಯಾಮಗಳನ್ನು ಮಾಡಲು ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ನಿತಿನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.