ADVERTISEMENT

ಆಮ್ಲಜನಕ ನಿಗದಿಗೊಳಿಸಿ ಜಿಲ್ಲೆಗಳ ಜಿದ್ದಾಜಿದ್ದಿ ತಪ್ಪಿಸಿ: ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 7 ಮೇ 2021, 13:39 IST
Last Updated 7 ಮೇ 2021, 13:39 IST
ಜಿ.ಟಿ.ದೇವೇಗೌಡ
ಜಿ.ಟಿ.ದೇವೇಗೌಡ   

ಮೈಸೂರು: ‘ಆಮ್ಲಜನಕದ ಕೊರತೆಯಿಂದ ಚಾಮರಾಜನಗರದಲ್ಲಿ ದುರಂತ ನಡೆದರೂ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಯಾವ್ಯಾವ ಜಿಲ್ಲೆಗೆ ಎಷ್ಟು ಪೂರೈಕೆಯಾಗಬೇಕು ಎಂಬುದನ್ನು ನಿಗದಿಪ‍ಡಿಸಿಲ್ಲ. ಇದರಿಂದಾಗಿ ಆಮ್ಲಜನಕಕ್ಕಾಗಿ ಜಿಲ್ಲೆಗಳ ನಡುವೆ ಜಿದ್ದಾಜಿದ್ದಿಯೇ ನಡೆದಿದೆ’ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಇಲ್ಲಿ ತಿಳಿಸಿದರು.

‘ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ನಡುವೆ ನಿತ್ಯವೂ ಆಮ್ಲಜನಕ ಪಡೆಯಲಿಕ್ಕಾಗಿ ಪೈಪೋಟಿಯೇ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಬೆಂಗಾವಲು ವಾಹನದೊಂದಿಗೆ ಮೈಸೂರಿಗೆ ಬಂದು ಆಮ್ಲಜನಕದ ಸಿಲಿಂಡರ್‌ ಕೊಂಡೊಯ್ಯುತ್ತಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೇ ಭಾರಿ ಅನಾಹುತವೇ ಘಟಿಸಲಿದೆ. ರಾಜೀನಾಮೆ ಸಲ್ಲಿಸಲೇಬೇಕಾಗುತ್ತದೆ’ ಎಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಜಿಟಿಡಿ, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

‘ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮೈಸೂರಿಗರಷ್ಟೇ ಅಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್‌ ರೋಗಿಗಳು ಇಲ್ಲಿದ್ದಾರೆ. ನಿತ್ಯವೂ 70 ಮೆಟ್ರಿಕ್‌ ಟನ್‌ ಆಮ್ಲಜನಕ ಬೇಕಿದೆ. ಆದರೆ ಇದೀಗ ಸಿಗುತ್ತಿರುವುದು 30 ಮೆಟ್ರಿಕ್‌ ಟನ್‌ ಮಾತ್ರ. ತುರ್ತಾಗಿ ಸಮಸ್ಯೆ ಬಗೆಹರಿಸದಿದ್ದರೇ; ಅಪಾಯ ತಪ್ಪಿದ್ದಲ್ಲ’ ಎಂದು ಜಿ.ಟಿ.ದೇವೇಗೌಡ ಪುನರುಚ್ಚರಿಸಿದರು.

ADVERTISEMENT

‘ರಾಜ್ಯದಲ್ಲಿ ಸರ್ಕಾರ ಇಲ್ಲವೇ? ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರಾ? ಕೈ ಮುಗಿದು ಮನವಿ ಮಾಡುವೆ. ತುರ್ತಾಗಿ ಸ್ಪಂದಿಸಿ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅವಶ್ಯವಿರುವಷ್ಟು ಆಮ್ಲಜನಕ ಪೂರೈಸುತ್ತಿಲ್ಲ. ಬಿಜೆಪಿಯ 25 ಸಂಸದರು ಏನು ಮಾಡುತ್ತಿದ್ದಾರೆ. ಯಡಿಯೂರಪ್ಪನವರೇ ತುರ್ತಾಗಿ ನವದೆಹಲಿಗೆ ಸರ್ವ ಪಕ್ಷದ ನಿಯೋಗವೊಂದನ್ನು ಕರೆದೊಯ್ಯಿರಿ. ಇಲ್ಲಿನ ಗಂಭೀರ ಪರಿಸ್ಥಿತಿ ಬಗ್ಗೆ ನಾವು ಮಾತನಾಡುತ್ತೇವೆ’ ಎಂದು ಶಾಸಕರು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿಯವರೇ ಕರ್ನಾಟಕಕ್ಕೆ ತುರ್ತಾಗಿ ಅವಶ್ಯವಿರುವಷ್ಟು ಆಮ್ಲಜನಕ ಕಳಿಸಿಕೊಡಿ. ಇಲ್ಲದಿದ್ದರೇ ರಾಜ್ಯದಲ್ಲಿ ಕೋವಿಡ್‌ನಿಂದ ಸಂಭವಿಸುವ ಪ್ರತಿಯೊಂದು ಸಾವಿನ ಹೊಣೆಯನ್ನು ಕೇಂದ್ರ–ರಾಜ್ಯವೇ ಹೊರಬೇಕಾಗುತ್ತದೆ’ ಎಂದ ಜಿಟಿಡಿ, ‘ನಮಗೆ ನ್ಯಾಯ ಕೊಡಿ. ಅನ್ಯಾಯ ಮಾಡಬೇಡಿ’ ಎಂದು ಮನವಿ ಮಾಡಿದರು.

‘ರಾಜ್ಯದ ಹಣೆಬರಹ ದುರಂತವಾಗಿದೆ. ಅಧಿಕಾರಿ ಮತ್ತು ಆಡಳಿತ ವರ್ಗ ಎರಡೂ ವಿಫಲವಾಗಿವೆ. ಯಡಿಯೂರಪ್ಪನವರೇ ನೆರೆಯ ಆಂಧ್ರದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಜಾರಿಗೊಳಿಸಿರುವ ಪರಿಣಾಮಕಾರಿ ಕ್ರಮಗಳತ್ತ ಒಮ್ಮೆ ಚಿತ್ತ ಹರಿಸಿ. ಸಚಿವರಿಗಷ್ಟೇ ಜವಾಬ್ದಾರಿ ಕೊಟ್ಟರೆ ಆಗಲ್ಲ. ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ’ ಎಂದು ಜಿ.ಟಿ.ದೇವೇಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.