ADVERTISEMENT

ದೀಪಗಳ ಬೆಳಕಿನಲ್ಲಿ ಅರಮನೆ ನಗರಿ

ನಿತ್ಯ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ಜಗಮಗ ಕಂಗೊಳಿಸಲಿರುವ ವಿದ್ಯುತ್‌ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 6:48 IST
Last Updated 18 ಅಕ್ಟೋಬರ್ 2020, 6:48 IST
ಮೈಸೂರು ದಸರಾ ಮಹೋತ್ಸವದ ವಿದ್ಯುತ್‌ ದೀಪಾಲಂಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಿದರು
ಮೈಸೂರು ದಸರಾ ಮಹೋತ್ಸವದ ವಿದ್ಯುತ್‌ ದೀಪಾಲಂಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಿದರು   

ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿನ ‘ಹಸಿರು ಮಂಟಪ’ವನ್ನು ದೀಪ ಬೆಳಗಿಸುವ ಮೂಲಕ, ಮೈಸೂರು ದಸರಾ ಮಹೋತ್ಸವದ ವಿದ್ಯುತ್‌ ದೀಪಾಲಂಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಸಚಿವರು ದೀಪ ಬೆಳಗಲು ಚಾಲನೆ ನೀಡುತ್ತಿದ್ದಂತೆ, ಮೈಸೂರು ನಗರದ ಪ್ರಮುಖ ಬೀದಿಗಳು ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದವು. ಜಗಮಗ ಕಂಗೊಳಿಸಿದ ವಿದ್ಯುತ್‌ ದೀಪಾಲಂಕಾರ ಮೈಸೂರಿಗರ ಮನಸೂರೆಗೊಂಡಿತು.

‘ಹಿಂದಿನ ದಸರೆಯಲ್ಲಿ ನೂರಕ್ಕೂ ಹೆಚ್ಚು ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುತ್‌ ದೀಪಗಳು ತಮ್ಮ ಬೆಳಕಿನಿಂದ ರಾರಾಜಿಸುತ್ತಿದ್ದವು. ಆದರೆ, ಈ ಬಾರಿ ಕೋವಿಡ್‌ನಿಂದ ಸರಳ ದಸರಾ ಆಚರಿಸಲಾಗುತ್ತಿದೆ. ಇದರಿಂದ ವಿದ್ಯುತ್‌ ದೀಪಾಲಂಕಾರವನ್ನು 50 ಕಿ.ಮೀ.ಗೆ ಸೀಮಿತಗೊಳಿಸಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶುಕ್ರವಾರ ಸಂಜೆ 5 -6 ಕಿ.ಮೀ. ನಷ್ಟು ದೂರದ ದೀಪಾಲಂಕಾರವನ್ನು ತೋರಿಸಿ, ಪುನಃ ಒಪ್ಪಿಗೆ ಪಡೆಯಲಾಗಿದೆ’ ಎಂದು ಸೋಮಶೇಖರ್ ತಿಳಿಸಿದರು.

ADVERTISEMENT

ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

ಕಣ್ತುಂಬಿಕೊಳ್ಳಲು ಜನ ಸಾಗರ

ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲು ಅವಕಾಶ ಸಿಗದಿದ್ದರಿಂದ ನಿರಾಸೆಗೊಂಡಿದ್ದ ಮೈಸೂರಿಗರು, ವಿದ್ಯುತ್‌ ದೀಪಾಲಂಕಾರಕ್ಕೆ ಚಾಲನೆ ಸಿಗುತ್ತಿದ್ದಂತೆ ಕಣ್ತುಂಬಿಕೊಳ್ಳಲು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ಗೆಳೆಯರು, ಆತ್ಮೀಯರು, ಕುಟುಂಬ ವರ್ಗದವರೊಡನೆ ತಂಡೋಪ ತಂಡವಾಗಿ ಏಕ ಕಾಲಕ್ಕೆ ಬೀದಿಗಿಳಿದಿದ್ದರಿಂದ ವಿದ್ಯುತ್‌ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ರಸ್ತೆಗಳಲ್ಲಿ ಜನ–ವಾಹನ ದಟ್ಟಣೆ ಉಂಟಾಯಿತು.

ಜನರು ಗುಂಪುಗೂಡುವುದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರೂ, ಪ್ರಯೋಜನವಾಗದ ಚಿತ್ರಣ ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.