ADVERTISEMENT

ಭಕ್ತಗಣವಿಲ್ಲದೆ ನಡೆದ ತಲಕಾಡು ಪಂಚಲಿಂಗ ದರ್ಶನ

ಕಾರ್ತೀಕ ಅಮಾವಾಸ್ಯೆ: ಪರಂಪರೆಯ ಪಾಲನೆ, ಭಕ್ತ ಸಮೂಹಕ್ಕೆ ನಿರಾಸೆ

ಡಿ.ಬಿ, ನಾಗರಾಜ
Published 15 ಡಿಸೆಂಬರ್ 2020, 2:50 IST
Last Updated 15 ಡಿಸೆಂಬರ್ 2020, 2:50 IST
ವೈದ್ಯನಾಥೇಶ್ವರ
ವೈದ್ಯನಾಥೇಶ್ವರ   

ತಲಕಾಡು: ಅಸಂಖ್ಯಾತ ಭಕ್ತ ಗಣದ ದರ್ಶನಕ್ಕೆ ಸಾಕ್ಷಿಯಾಗುತ್ತಿದ್ದ ಐತಿಹಾಸಿಕ ಪಂಚಲಿಂಗ ದರ್ಶನ; ಈ ಬಾರಿ ಕೋವಿಡ್‌–19 ಸಾಂಕ್ರಾಮಿಕ ಸೋಂಕಿನಿಂದಾಗಿ ಧಾರ್ಮಿಕ ವಿಧಿ–ವಿಧಾನ, ಸಂಪ್ರದಾಯ ಪಾಲನೆಗಷ್ಟೇ ಸೀಮಿತವಾಯಿತು.

ಕಾರ್ತೀಕ ಮಾಸದ ಕೊನೆಯ ಸೋಮವಾರದ (ಅಮಾವಾಸ್ಯೆ) ನಸುಕಿನ ಜಾವ 3 ಗಂಟೆಗೆ ಐದು ದೇಗುಲಗಳಲ್ಲೂ ಪಂಚಲಿಂಗ ದರ್ಶನ ಮಹೋತ್ಸವದ ಪೂಜಾ ವಿಧಿ–ವಿಧಾನ ವಿಧ್ಯುಕ್ತವಾಗಿ ಆರಂಭಗೊಂಡವು. ಸಚಿವ, ಶಾಸಕರು, ಜಿಲ್ಲಾಡಳಿತದ ಉನ್ನತ ಅಧಿಕಾರಿ ವರ್ಗವಷ್ಟೇ ಇದಕ್ಕೆ ಸಾಕ್ಷಿಯಾಯಿತು.

ತಲಕಾಡಿನ ಗೋಕರ್ಣ ಸರೋವರದಲ್ಲಿ ನಸುಕಿನ 3 ಗಂಟೆಗೆ ಮಿಂದ ಅರ್ಚಕ ವೃಂದ, ಅಲ್ಲಿಯೇ ಗಂಗಾ ಪೂಜೆ ನಡೆಸಿತು. 4 ಗಂಟೆಗೆ ಕಳಶ ವೈದ್ಯನಾಥೇಶ್ವರ ದೇಗುಲದ ಗರ್ಭ ಗುಡಿ ಪ್ರವೇಶಿಸಿತು. ಕುಹೂ ಯೋಗ, ಜೇಷ್ಠಾ ನಕ್ಷತ್ರದಲ್ಲಿ
4.30ಕ್ಕೆ ಆರಂಭಗೊಂಡ ಶುಭ ವೃಶ್ಚಿಕ ಲಗ್ನದಲ್ಲಿ ಆನಂದ ದೀಕ್ಷಿತ್ ನೇತೃತ್ವದ ಅರ್ಚಕರ ಸಮೂಹ, ಮಹಾನ್ಯಾಸಪೂರ್ವಕ ರುದ್ರಾಭಿಷೇಕ ನೆರವೇರಿಸಿತು.

ADVERTISEMENT

ತೈಲಾಭಿಷೇಕ, ಕ್ಷೀರಾಭಿಷೇಕ, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಫಲಾಮೃತ, ಶಾಲಾನ್ಯ, ಭಸ್ಮೋದಕ, ಗಂಧೋದಕ, ಹರಿದ್ರೋದಕ, ಕುಂಕುಮೋದಕ, ಸುವರ್ಣೋದಕ, ಪುಷ್ಪೋದಕದಿಂದ ಶಿವಲಿಂಗಗಳಿಗೆ ಅಭಿಷೇಕ ನೆರವೇರಿಸಿದ ಅರ್ಚಕ ವೃಂದ, ಕೊನೆಯಲ್ಲಿ ಶಂಖದಿಂದ ಪುಣ್ಯ ಜಲದ ಅಭಿಷೇಕ ನಡೆಸಿತು. ಬೆಳಿಗ್ಗೆ 5.30ರ ವೇಳೆಗೆ ಮಹಾನೈವೇದ್ಯ, ಮಹಾಮಂಗಳಾರತಿಯೂ ನಡೆದವು.

ಇದೇ ಸಮಯದಲ್ಲಿ ಪಾತಾಳೇಶ್ವರ, ಮರಳೇಶ್ವರ, ಅರ್ಕೇಶ್ವರ, ಮುಡುಕುತೊರೆಯ ಮಲ್ಲಿಕಾರ್ಜುನೇಶ್ವರ ದೇಗುಲಗಳಲ್ಲೂ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು.

ಭಣಭಣ: ಇದೇ ಮೊದಲ ಬಾರಿಗೆ ಭಕ್ತ ಸಾಗರವಿಲ್ಲದೇ ನಡೆದ ಪಂಚಲಿಂಗ ದರ್ಶನ ಭಣಗುಡುತ್ತಿತ್ತು. ಸಚಿವರು, ಅಧಿಕಾರಿಗಳ ದರ್ಶನ ಮುಗಿದ ಬೆನ್ನಿಗೆ ಭಕ್ತ ಸಮೂಹವೂ ದೇಗುಲಗಳಿಗೆ ದರ್ಶನಕ್ಕಾಗಿ ದಾಂಗುಡಿಯಿಟ್ಟಿತು. ತಲಕಾಡು ಸುತ್ತಲೂ ಪೊಲೀಸ್ ಪಹರೆಯಿದ್ದರೂ ಪರವೂರಿನ ಪ್ರಭಾವಿ ಭಕ್ತರು ಸನ್ನಿಧಿಯಲ್ಲಿ ಗೋಚರಿಸಿದರು.

ನಸುಕಿನಲ್ಲೇ ಸುರಿಯಲಾರಂಭಿಸಿದ ಮಂಜು, ಬೆಳಿಗ್ಗೆ 8 ಗಂಟೆಯಾದರೂ ಭುವಿಗೆ ಮುತ್ತಿಕ್ಕುವಂತಿತ್ತು. ವಿಶೇಷ ಪೂಜೆ ಮುಗಿಯುತ್ತಿದ್ದಂತೆ ಇದನ್ನು ಲೆಕ್ಕಿಸದೆ ಭಕ್ತರು ದರ್ಶನಕ್ಕೆ ಮುಂದಾಗಿದ್ದು ಕಂಡುಬಂದಿತು.

1903ರಿಂದ ದರ್ಶನದ ದಾಖಲೆ

‘ಸ್ಕಂದ ಪುರಾಣ, ಕಾವೇರಿ ಮಹಾತ್ಮೆಯಲ್ಲೂ ಪಂಚಲಿಂಗ ದರ್ಶನದ ಉಲ್ಲೇಖವಿದೆ. ನಾಲ್ಕು ಯುಗದಲ್ಲೂ ನಡೆದಿದೆ ಎಂಬ ಪ್ರತೀತಿಯಿದೆ. ಆದರೆ ನಮ್ಮ ಬಳಿ ಅಧಿಕೃತ ದಾಖಲೆಗಳಿರುವುದು 1903ರಿಂದ ಮಾತ್ರ’ ಎಂದು ವೈದ್ಯನಾಥೇಶ್ವರ ದೇಗುಲದ ಪ್ರಧಾನ ಅರ್ಚಕ ಆನಂದ ದೀಕ್ಷಿತ್ ತಿಳಿಸಿದರು.

‘ಮೈಸೂರು ಅರಮನೆಯ ಪಂಚಾಂಗದವರ ಬಳಿ 1870ರಿಂದಲೂ ನಡೆದಿರುವ ಪಂಚಲಿಂಗ ದರ್ಶನದ ದಾಖಲೆಗಳಿವೆ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ದರ್ಶನಭಾಗ್ಯದಿಂದ ಪುಣ್ಯ...’

‘ನನ್ನ ಐದನೇ ಪಂಚಲಿಂಗ ದರ್ಶನವಿದು. ಗೋಕರ್ಣ ಸರೋವರ ದಲ್ಲಿ ಸ್ನಾನಗೈದು ಪಂಚಲಿಂಗಗಳ ದರ್ಶನ ಪಡೆದರೆ ಪುಣ್ಯಸಿಗಲಿದೆ. ವೈದ್ಯನಾಥೇಶ್ವರ ಸತ್ಯದ ದೇವರು. ಇಲ್ಲಿಗೆ ಬಂದವರಿಗೆ ಒಳ್ಳೆಯದಾಗುವುದರಿಂದ ಸಾಕಷ್ಟು ಜನರು ಬರುತ್ತಾರೆ’ ಎಂದವರು ಗೃಹಿಣಿ ಉಮಾ.

‘ನನ್ನ ಎಂಟನೇ ಪಂಚಲಿಂಗ ದರ್ಶನವಿದು. ಈ ಹಿಂದಿನ ಏಳು ದರ್ಶನಗಳಲ್ಲೂ ಕಾಲಿಡಲು ಜಾಗವಿರುತ್ತಿರಲಿಲ್ಲ. ಎತ್ತ ನೋಡಿದರೂ ಜನವೋ ಜನ. ಆದರೆ ಈ ಬಾರಿಯ ದರ್ಶನ ಭಣಭಣ. ಸರ್ಕಾರ ಭಕ್ತರಿಗೆ ‘ದರ್ಶನ ಭಾಗ್ಯ’ ಕಲ್ಪಿಸಬೇಕಿತ್ತು’ ಎಂದು ವೈದ್ಯನಾಥೇಶ್ವರ ದೇಗುಲದ ಮಾಜಿ ಟ್ರಸ್ಟಿ ನಂಜುಂಡಸ್ವಾಮಿ ತಿಳಿಸಿದರು.

‘ಪಂಚಲಿಂಗ ದರ್ಶನ ವಾರಗಟ್ಟಲೇ ನಡೆಯುತ್ತಿತ್ತು. ಊರಿನಲ್ಲಿ ವಹಿವಾಟು ಹೆಚ್ಚಿರುತ್ತಿತ್ತು. ನನ್ನ ಏಳನೇ ದರ್ಶನವಿದು. ಈ ಬಾರಿ ಯಾವೊಂದು ಚಟುವಟಿಕೆ ನಡೆದಿಲ್ಲ. ಪೂಜೆಯಷ್ಟೇ’ ಎಂದು ಗಾಯತ್ರಿ, ಸಾವಿತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.