ADVERTISEMENT

ಕಾರ್ಯಕರ್ತರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ

ಪಿರಿಯಾಪಟ್ಟಣದಲ್ಲಿ ಬಿಜೆಪಿ ನಡೆ ಪಂಚಾಯಿತಿ ಕಡೆಗೆ: ಸಚಿವ ಎಸ್‌.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 7:24 IST
Last Updated 9 ನವೆಂಬರ್ 2020, 7:24 IST
ಸಭೆಯಲ್ಲಿ ಎಸ್‌.ಟಿ.ಸೋಮಶೇಖರ್, ಸಿ.ಎಚ್‌.ವಿಜಯಶಂಕರ್‌ ಪಾಲ್ಗೊಂಡರು
ಸಭೆಯಲ್ಲಿ ಎಸ್‌.ಟಿ.ಸೋಮಶೇಖರ್, ಸಿ.ಎಚ್‌.ವಿಜಯಶಂಕರ್‌ ಪಾಲ್ಗೊಂಡರು   

ಮೈಸೂರು: ‘ಬಿಜೆಪಿಯ ನಡೆ ಪಂಚಾಯಿತಿಗಳ ಕಡೆಗೆ’ ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ನಮಗಾಗಿ ದುಡಿದ ಕಾರ್ಯಕರ್ತರ ಚುನಾವಣೆಗೆ ನಾವು ಶ್ರಮಿಸುತ್ತೇವೆ’ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬೆಟ್ಟದಪುರದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಭಾನುವಾರ ಮಾತನಾಡಿ, ‘ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ತ್ವರಿತವಾಗಿ ಪಕ್ಷ ಸಂಘಟನೆ ಮಾಡಿ ಕಾರ್ಯಕರ್ತರು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ನಿಮ್ಮ ಗೆಲುವಿಗೆ ಪ್ರ‍ಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ’ ಕಾರ್ಯಕರ್ತರಿಗೆ ಭರವಸೆ ನೀಡಿದರು.

‘ಹೇಗೆ ನಮ್ಮ ಚುನಾವಣೆಗಳಿಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿ ದ್ದೇವೋ ನಮಗಾಗಿ ದುಡಿದ ಕಾರ್ಯಕರ್ತರ ಚುನಾವಣೆಗೂ ಅದೇ ರೀತಿ ದುಡಿಯಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅದಾಲತ್ ಮಾಡುತ್ತೇನೆ. ಆ ಸಂದರ್ಭದಲ್ಲಿ ನಾನು ಈ ಮೊದಲೇ ಕೊಟ್ಟ ಮನವಿ ಪತ್ರಗಳ ಬಗ್ಗೆಯೂ ಚರ್ಚಿಸಿ, ಕೆಲಸ ಮಾಡಿಕೊಡುತ್ತೇನೆ’ ಎಂದು ಹೇಳಿದರು.

‘ನಾವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ರೈತರಿಗೆ ಈಗ ತಮ್ಮ ಬೆಳೆಯನ್ನು ರಾಜ್ಯದ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅಧಿಕಾರ ಕೊಟ್ಟಂತಾಗಿದೆ. ಜೊತೆಗೆ ಎಪಿಎಂಸಿ ಪರವಾನಗಿ ಹೊಂದಿ ಬೇರೆಡೆ ಮಾರಾಟ ಮಾಡಿದರೆ ದಂಡ ವಿಧಿಸುವುದಲ್ಲದೆ, ಪರವಾನಗಿಯನ್ನೇ ರದ್ದುಪಡಿಸಲಾಗುತ್ತಿತ್ತು. ನಮ್ಮ ಸರ್ಕಾರ ಈ ಕಾನೂನು ತೊಡಕನ್ನು ನಿವಾರಿಸಿದೆ’ ಎಂದು ತಿಳಿಸಿದರು.

ದಸರಾಕ್ಕೆ ಸಂಬಂಧಿಸಿದಂತೆ ಲೆಕ್ಕ ಕೊಡುವುದಿಲ್ಲ ಎಂಬ ಆರೋಪ ಪ್ರತಿವರ್ಷ ಕೇಳಿಬರುತ್ತಿತ್ತು. ಹಾಗಾಗಿ ದಸರಾ ಮುಗಿದ ತಕ್ಷಣ ಲೆಕ್ಕ
ಕೊಟ್ಟಿದ್ದೇವೆ. 10 ದಿನದ ದಸರಾ ಆಚರಣೆ ಸರಳವಾಗಿ ಮಾಡಿ ತೋರಿಸಲಾಗಿದೆ. ₹ 10 ಕೋಟಿಯಲ್ಲಿ ಒಟ್ಟಾರೆಯಾಗಿ ₹ 7.8 ಕೋಟಿ ಉಳಿತಾಯವಾಗಿದೆ ಎಂದರು.

ಬಿಜೆಪಿಗೆ ಸೇರ್ಪಡೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದ ಯುವಕರಿಗೆ ಪಕ್ಷದ ಶಾಲು ನೀಡುವ ಮೂಲಕ ಅಧಿಕೃತವಾಗಿ ಬರಮಾಡಿಕೊಳ್ಳಲಾಯಿತು.

ಮುಖಂಡರಾದ ಎಚ್‌.ವಿಜಯಶಂಕರ್, ಡಾ.ಪ್ರಕಾಶ್‌ ಬಾಬು, ಬಿಜೆಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.