ADVERTISEMENT

ಕೊಳೆಗೇರಿ ನಿವಾಸಿಗಳ ಸ್ಥಿತಿ ಅಯೋಮಯ

ಕೊಳಕಾದ ಕೊಳೆಗೇರಿ ನಿವಾಸಿಗಳ ಬದುಕು

ಪ್ರದೀಪ ಕುಂದಣಗಾರ
Published 20 ಮೇ 2019, 10:30 IST
Last Updated 20 ಮೇ 2019, 10:30 IST
.
.   

ಬದುಕು ನರಕಸದೃಶ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಹಾಗೆಂದರೆ ಏನು ಎಂಬ ಕಲ್ಪನೆ ಹಲವರಿಗೆ ಕಣ್ಮುಂದೆ ಮೂಡದೇ ಇರಬಹುದು. ಇದರ ಚಿತ್ರಣವನ್ನು ನೋಡಬೇಕೆಂದರೆ ಕೊಳೆಗೇರಿಗಳಿಗೆ ಒಮ್ಮೆ ಭೇಟಿ ನೀಡಿದರೆ ಸಾಕು. ಅಲ್ಲಿನ ಜನರ ಸ್ಥಿತಿಗತಿ, ಕನಿಷ್ಠ ಸೌಲಭ್ಯಗಳಿಲ್ಲದಿದ್ದರೂ ಬದುಕು ಹೇಗೆ ಸಾಗುತ್ತಿದೆ ಎಂಬುದು ಕಣ್ಣಿಗೆ ರಾಚುತ್ತದೆ.

ಸ್ವಚ್ಛ ಭಾರತ ಯೋಜನೆಯಡಿ ‘ಸ್ವಚ್ಛನಗರಿ ಮೈಸೂರು’ ಎಂದು ಮೂರು ವರ್ಷಗಳ ಹಿಂದೆ ಪ್ರಶಸ್ತಿ ಬಂತು. ಈಗಲೂ ಮೊದಲ ಐದು ಸ್ಥಾನದಲ್ಲಿಯೇ ಇದೆ. ಆದರೆ, ನಗರ ಸ್ವಚ್ಛಗೊಳಿಸಿ ಮನೆ ಸೇರುವ ಪೌರಕಾರ್ಮಿಕರು, ಎರಡೊತ್ತಿನ ಗಂಜಿಗಾಗಿ ಕೂಲಿ– ನಾಲಿ ಮಾಡಿಕೊಂಡು ಮನೆ ಸೇರುವವರ ಬದುಕು ಕೊಳೆಗೇರಿಗಳಲ್ಲಿ ಕೊಳೆಯುತ್ತಿದೆ. ಮಕ್ಕಳಿಗೆ ಓದಲು ಶಾಲೆ ಇಲ್ಲ, ಯಾರಿಗಾದರೂ ಹುಷಾರಿಲ್ಲವೆಂದರೆ ಅರ್ಜೆಂಟಾಗಿ ಹತ್ತಿರದಲ್ಲಿ ಆಸ್ಪತ್ರೆಯಿಲ್ಲ, 108 ಆಂಬುಲೆನ್ಸ್ ಬಂದರೂ ಗಲ್ಲಿಯಲ್ಲಿ ನುಗ್ಗಲು ಜಾಗವೇ ಇಲ್ಲ. ಇದು ಮೈಸೂರಿನ ಕೊಳೆಗೇರಿಗಳಲ್ಲಿ ಕಾಣುವ ಸಹಜ ಚಿತ್ರಣ.

ಮನೆ ಕಾಣುತ್ತವೆ. ಯಾವಾಗ ಬೀಳುತ್ತದೆಯೋ ಎಂಬ ಭಯ. ಮಳೆಯಾದರೆ ಮೇಲಿನ ಮಹಡಿ ಸೋರುತ್ತವೆ. ಬಾತ್‌ರೂಮ್ ಹಾಗೂ ಶೌಚಾಲಯಗಳ ನೀರು ನಿತ್ಯ ಕೆಳಗಿನ ಮನೆಗಳನ್ನು ಸೇರುತ್ತಿದೆ. ಗುಡಿಸಲು ಮುಕ್ತನಗರ ಮಾಡಲು ‘ಜೆ ನರ್ಮ್’ ಯೋಜನೆಯಡಿ ನಿರ್ಮಿಸಿದ ‘ಜಿ ಪ್ಲಸ್ 3 ’ ಮೂರಂತಸ್ತಿನ ಮನೆಗಳು ಕಟ್ಟಿದ ನಾಲ್ಕೇ ವರ್ಷಗಳಲ್ಲಿ ಬೀಳುವ ಸ್ಥಿತಿ ಬಂದಿವೆ. ಸೋರುವ ಬಾತ್‌ರೂಮ್‌ ಹಾಗೂ ಶೌಚಾಲಯ. ವಯಸ್ಸಾದವರು ಮೇಲಿನ ಮನೆಗಳಿಗೆ ಹೋಗಲು ಆಗದೆ ಮೆಟ್ಟಿಲಿನ ಮೇಲೆ ನಿಂತು, ಕೆಲಹೊತ್ತು ಕುಳಿತು ಹತ್ತುತ್ತಿರುವುದನ್ನು ಕಾಣಬಹುದಾಗಿದೆ. ಮೂರ್ನಾಲ್ಕು ವರ್ಷದ ಮನೆಗಳು 40 ವರ್ಷದ ಮನೆಗಳಂತಾಗಿವೆ. ಎಲ್ಲೆಂದರಲ್ಲಿ ಕಸ, ಮೂಲ ಸೌಕರ್ಯಗಳಿಲ್ಲ. ಇವರ ಬದುಕು ಆ ದೇವರಿಗೆ ಪ್ರೀತಿ.

ADVERTISEMENT

ಎನ್‌.ಆರ್‌. ಮೊಹಲ್ಲಾದಲ್ಲಿರುವ ಜ್ಯೋತಿ ಕಾಲೊನಿಯಲ್ಲಿ ಹಳೆಯ ಮನೆಗಳನ್ನು ನೆಲಸಮ ಮಾಡಿ ಹೊಸ ಮನೆ ಕಟ್ಟಿಕೊಡಲು ಶುರು ಮಾಡಿ ಮೂರ್ನಾಲ್ಕು ವರ್ಷ ಕಳೆದಿವೆ. ಆದರೆ, ಅವರಿಗೆ ಇನ್ನೂ ಸೂರಿಲ್ಲದಂತಾಗಿದೆ. ಮನೆಯ ಪಕ್ಕದಲ್ಲಿಯೇ ಶೆಡ್‌ ಹಾಕಿಕೊಂಡು ಮಡದಿ–ಮಕ್ಕಳು ಸಾಕುವ ಸ್ಥಿತಿ ಇದೆ. ಮಕ್ಕಳು ಎಸ್ಸೆಸ್ಸೆಲ್ಸಿ ಬಂದವರೆ ಎಂದು ಶೆಟ್‌ನಲ್ಲಿ ವಾಸವಾಗಿರುವ ಚಾಮುಂಡಿ ಕುಟುಂಬ ಅಳಲು ಹೇಳಿಕೊಂಡರು.

ಮನೆ ನೆಲಸಮ ಮಾಡಿದರೆ ಇರುವುದೆಲ್ಲ ಎಂದು ಮನೆ ಕೆಡುವಲು ಬಿಟ್ಟಿಲ್ಲ. ಆದೆ, ಮಳೆಯಾದರೆ ತಾರಸಿಯಿಂದ ನೀರು ಬರುತ್ತದೆ. ಬದುಕು ಬಹಳ ಕಷ್ಟವಾಗಿದೆ ಎಂದರು ಜ್ಯೋತಿ ಕಾಲೊನಿಯ ಭಾಗ್ಯಲಕ್ಷ್ಮಿ.

ಅಂಬೇಡ್ಕರ್‌ ಕಾಲೊನಿ ಗಲ್ಲಿಯಲ್ಲಿ ಜಾಗವೇ ಇಲ್ಲ: ಅಶೋಕಪುರಂನ 13ನೇ ಕ್ರಾಸ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಕಾಲೊನಿ ಮೈಸೂರಿನ ಮೊದಲು ಹಾಗೂ ಅತ್ಯಂತ ಹಳೆಯದಾದ ಕೊಳೆಗೇರಿ. ಇದು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಶುರುವಾದ ಕಾಲೊನಿ. ಆಗ ಇಲ್ಲಿ 120 ಕುಟುಂಬಗಳಿಗೆ ಮನೆ ಕಟ್ಟಿ ಜೀವನ ನಿರ್ವಹಣೆಗೆ ಹಣ ಕೊಡುತ್ತಿದ್ದರು. ಈಗ ಇಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಕೆಲವರು ಉತ್ತಮ ಮನೆ ಕಟ್ಟಿಕೊಂಡಿದ್ದರೆ ಆದಾಯ ಕಡಿಮೆ ಇರುವ ಬಹುತೇಕ ಕುಟುಂಬಗಳು ಕನಿಷ್ಠ ಸೌಲಭ್ಯಗಳಿಲ್ಲದೇ ನರಳುತ್ತಿವೆ. ಇಲ್ಲಿ ಎರಡು ಮನೆಗಳ ನಡುವೆ ಕನಿಷ್ಠ ಜಾಗವೂ ಇಲ್ಲ. ಎದುರಿನಿಂದ ಯಾರಾದರೂ ಬಂದರೆ ಮೈ ತಾಕದೆ ಹೋಗಬೇಕೆಂದರೆ ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಸ್ವಲ್ಪ ಸರಿಯಲೇಬೇಕು.

‘ನೋಡ್ರಿಲ್ಲಿ ಒಳಚರಂಡಿ ನೀರು ಮನೆಗಳ ಮುಂದೆ ನಿಂತಿದೆ. ಜಾಗ ಒತ್ತುವರಿಯಾಗಿದ್ದು ರಿಪೇರಿ ಮಾಡಲು ಆಗುತ್ತಿಲ್ಲ. ನಾವೆಲ್ಲ ಸೌಲಭ್ಯ ವಂಚಿತರಾಗಿ ಗಬ್ಬು ವಾಸನೆಯಲ್ಲಿ ಬದುಕುತ್ತಿದ್ದೇವೆ. ಪಕ್ಕದ ಈ ಮನೆಯಲ್ಲಿ ಬಾಣಂತಿ ಇದ್ದಾರೆ. ಮಗುವಿನ ಉಸಿರಾಟ ಹೇಗೆ? ನೀವೆ ನೋಡಿ. ಊರ ಸ್ವಚ್ಛ ಮಾಡುವ ಜನರ ಬದುಕು ಹೀಗಿದೆ’ ಎಂದು ನಿವಾಸಿ ಎಚ್‌.ಕೃಷ್ಣಪ್ಪ ನೋವಿನಿಂದ ಹೇಳಿದರು.

ಯಾರಿಗಾದರೂ ಆರೋಗ್ಯ ಹದಗೆಟ್ಟರೆ, ಹೆರಿಗೆ ನೋವು ಬಂದರೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಬರಲು ಜಾಗವಿಲ್ಲ.

ಕಾಲೊನಿಯ ಒಂದು ಕಡೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಾಂಕ್ರೀಟ್ ಮನೆ ಗಳನ್ನು ಕಾಲಂ ಹಾಕಿ ಕಟ್ಟಲಾಗುತ್ತಿದೆ. ಹಲವು ಕುಟುಂಬಗಳಿಗೆ ಗಟ್ಟಿಯಾದ ಮನೆ ಕಟ್ಟಿ ಕೊಡು ವುದಾಗಿ ಶಾಸಕ ಎಸ್‌.ಎ.ರಾಮದಾಸ್ ಭರವಸೆ ನೀಡಿದ್ದಾರೆ ಎಂದು ನಿವಾಸಿಗಳು ಹೇಳುತ್ತಾರೆ.

ಮಾನಂದವಾಡಿ ರಸ್ತೆಯ ರೇಷ್ಮೆ ಕಾರ್ಖಾನೆಯ ಬಳಿಯ ರಾಜೀವ್ ಗಾಂಧಿ ಕಾಲೊನಿಯಲ್ಲಿ ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ ಎರಡು ಅಂತಸ್ತಿನ ಮನೆಗಳ ಚಾವಣಿ ಸಿಮೆಂಟ್‌ ಉದುರುತ್ತಿದ್ದು, ಸರಳುಗಳು ಮೇಲೆದ್ದಿವೆ. ಮೇಲಂತಸ್ತಿನ ಮನೆಗಳಿಗೆ ಹೋಗಲು ಇರುವ ಮೆಟ್ಟಿಲುಗಳ ತಡೆಗೋಡೆ ಇದ್ದು ಇಲ್ಲದಂತಾಗಿದ್ದು, ಮಕ್ಕಳು ವಯಸ್ಸಾದವರು ಹತ್ತಲು ಇಳಿಯಲು ಪರದಾಡುತ್ತಿದ್ದಾರೆ.

ಸ್ನಾನದ ಗೃಹಗಳು ಸೋರುತ್ತಿದ್ದು, ಮೇಲಿನ ಮನೆಯವರು ಬಾತ್‌ ರೂಮ್‌ಗೆ ಹೋಗುವ ಮುನ್ನ ಕೆಳಗಿನ ಮನೆಯವರು ಬಾತ್‌ರೂಮ್‌ ಕೆಲಸ ಮುಗಿಸಿಕೊಳ್ಳಬೇಕಾದ ಸ್ಥಿತಿ ಇದೆ.

ವಿಮಾನ ನಿಲ್ದಾಣ ಹಿಂಭಾಗದ ಮಂಡಕಳ್ಳಿಯಲ್ಲಿ ನಗರದಿಂದ ಐದು ಕಿ.ಮೀ ದೂರ ಕೊಳೆಗೇರಿಗೆ ಸರಿಯಾದ ರಸ್ತೆಗಳೇ ಇಲ್ಲ, ಬಸ್ ವ್ಯವಸ್ಥೆ ಇಲ್ಲ, ಮೂಲ ಸೌಲಭ್ಯಗಳ ಕೊರತೆ. ಶಾಲೆ ಹಾಗೂ ಶ್ರೀರಾಮನ ಪ್ರಾರ್ಥನಾ ಮಂದಿರಕ್ಕೆ ನಿಗದಿತ ಸ್ಥಳದಲ್ಲಿ ದೇಗುಲ, ವಾಹನ ಇಡಲು ಶೆಡ್‌ ತಲೆಎತ್ತಿವೆ. ಆದರೆ, ಅದನ್ನು ಪ್ರಶ್ನಿಸುತ್ತಿಲ್ಲ. ಸರ್ಕಾರವೂ ಕ್ರಮ ತೆಗೆದುಕೊಂಡಿಲ್ಲ. ಇದು ಗ್ರಾಮ ಪಂಚಾಯಿತಿಗೂ ಸೇರದೆ, ಪಾಲಿಕೆಗೂ ಹಸ್ತಾಂತರವಾಗದ್ದರಿಂದ ತ್ರಿಶಂಕು ಸ್ಥಿತಿ ನಿವಾಸಿಗಳದ್ದಾಗಿದೆ.

‘ಬೆಳಗಾದರೆ ಕೆಲಸಕ್ಕೆ ಹೋಗಲು ಎರಡು ಕಿ.ಮೀ ನಡೆದು ಬಂದು ಬಸ್ ಹತ್ತಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಕ್ಕಾಲು ಗಂಟೆ ಮನೆಯಿಂದ ಕರೆದುಕೊಂಡು ಹೋಗಿ ಬಸ್‌ ಹತ್ತಿಸಬೇಕು. ಆದರೆ, ದಡದಹಳ್ಳಿ, ಸಿದ್ದಹಳ್ಳಿ ಬರುವ ಬಸ್‌ಗಳೇ ಇಲ್ಲಿನ ನಿವಾಸಿಗಳಿರುವ ವ್ಯವಸ್ಥೆ ಇದು. ಫುಲ್ ಆದರೆ, ಆಟೊ, ಟೆಂಪೊಗಳೇ ಗತಿ ಎನ್ನುತ್ತಾರೆ’ ಪಲ್ಲಮ್ಮ ಮತ್ತು ರಾಜೇಶ್ವರಿ.

ಓವರ್‌ ಹೆಡ್ ಟ್ಯಾಂಕ್ ಇದೆ ನೀರು ಬರುತ್ತಿಲ್ಲ. ತೊಂಬೆ ಹಾಕಿ ಬೋರವೆಲ್‌ ನೀರು ಸರಬರಾಜು ಆಗುತ್ತವೆ. ಕರೆಂಟ್‌ ಇಲ್ಲ ವಾದರೆ, ಮೋಟರ್ ಸುಟ್ಟರೆ ಯಾರೂ ಇತ್ತ ನೋಡು ವುದಿಲ್ಲ. ಒಂದು ಗಲ್ಲಿಗೆ ನೀರಿದ್ದರೆ ಮತ್ತೊಂದು ಗಲ್ಲಿಗೆ ಇಲ್ಲ ಎಂದ ಗೀತಮ್ಮ ಹಾಗೂ ವಸಂತಮ್ಮ, ನಮಗೆ ಕಾಲು ನೋವು ನೀರಿಲ್ಲದಿದ್ದರೆ ಜೀವನ ನಡೆಸುವುದು ಹೇಗೆ ಎಂದರು.

ಮಾದಾಪುರ ರೈಲ್ವೆ ಗೇಟ್‌ ಬಳಿ ಇರುವ ಕೊಳೆಗೇರಿ ಸ್ಥಿತಿಯೂ ಸರಿಯಲ್ಲ. ಕೊಳೆ ಗೇರಿ ಆರಂಭದಲ್ಲಿಯೇ ಶುದ್ಧ ನೀರಿನ ನಿರ್ಮಿಸ ಲಾಗಿದೆ. ಯಂತ್ರ ಅಳವಡಿಸಿಲ್ಲ. ಆಗಲೇ ಅದು ಕಸ–ಕಡ್ಡಿ ಮುಳ್ಳಿನಿಂದ ತುಂಬಿದೆ.

ನಗರದಲ್ಲಿ 62 ಕೊಳೆಗೇರಿಗಳು ಇವೆ ಎಂದು ಸರ್ಕಾರ ಗುರುತಿಸಿದೆ. ಅವುಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಲು ಹತ್ತಾರು ಯೋಜನೆಗಳನ್ನು ರೂಪಿಸಿ, ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಅವು ಅವರಿಗೆ ತಲುಪಿದೆಯೆ? ಎಲ್ಲಿ ಹಣ ಪೋಲಾಗುತ್ತಿದೆ ಎಂಬುದನ್ನು ಪರಿಶೀಲಿಸುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.