ADVERTISEMENT

ಜನ ಬದಲಾವಣೆ ಬಯಸಿದ್ದು, ಎಎಪಿ ಬೆಂಬಲಿಸುತ್ತಾರೆ: ಭಾಸ್ಕರ್‌ ರಾವ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 13:32 IST
Last Updated 4 ಆಗಸ್ಟ್ 2022, 13:32 IST
   

ಮೈಸೂರು: ‘ರಾಜ್ಯದ ಜನರು ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್ ಪಕ್ಷಗಳ ಆಡಳಿತವನ್ನು ನೋಡಿ ಬೇಸತ್ತಿದ್ದಾರೆ. ಅವರಿಗೆ ಬದಲಾವಣೆ ಬೇಕಿದ್ದು, ಆಮ್ ಆದ್ಮಿ ಪಕ್ಷ (ಎಎಪಿ)ವನ್ನು ಬೆಂಬಲಿಸುತ್ತಾರೆ’ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ತಿಳಿಸಿದರು.

ನಗರದ ಚಾಮುಂಡಿಪುರಂ ವೃತ್ತದ ಸಮೀಪ ಪಕ್ಷದ ನೂತನ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವೆಲ್ಲರೂ ಸೇರಿ ಪಕ್ಷವನ್ನು ಬೆಳೆಸಬೇಕು. ಪಕ್ಷವು ರಾಜ್ಯದಲ್ಲಿ ಬೆಳವಣಿಗೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರೆಲ್ಲರೂ ಪ್ರತಿಷ್ಠೆ ಬಿಟ್ಟು ಕೆಲಸ ಮಾಡಬೇಕು. ನನ್ನಿಂದಲೇ ಎಲ್ಲವೂ ಎನ್ನುವವರಿಂದ ಸಂಘಟನೆ ಬೆಳೆಸಲು ಸಾಧ್ಯವಿಲ್ಲ. ಅಂಥವರ ಅಗತ್ಯವೂ ನಮಗಿಲ್ಲ. ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ನಮ್ಮೆಲ್ಲರ ಧ್ಯೇಯವಾಗಬೇಕು’ ಎಂದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷೆ ಪದ್ಮಾ ಮಾತನಾಡಿ, ‘ಮೈಸೂರಿನಲ್ಲಿ ಪಕ್ಷದ ಚಟುವಟಿಕೆಗಳನ್ನು 2013ರಲ್ಲಿ ಆರಂಭಿಸಲಾಯಿತು. ಅಂದು ಕೆಲವರಷ್ಟೆ ಸಂಘಟನೆಯಲ್ಲಿದ್ದರು. ಇಂದು ನೂರಾರು ಮಂದಿ ಸೇರಿದ್ದಾರೆ. ಸಾವಿರಾರು ಮಂದಿ ಬೇರೆ ಪಕ್ಷದಿಂದ ನಮ್ಮಲ್ಲಿಗೆ ಬರುತ್ತಿದ್ದಾರೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ, ಪಕ್ಷದ ಕಾರ್ಯಕರ್ತರು ಚಾಮುಂಡಿಪುರಂ, ವಿದ್ಯಾರಣ್ಯಪುರಂ ಹಾಗೂ ಜೆಎಲ್‌ಬಿ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದರು. ಆರಾಧ್ಯ ಮಹಾಸಭಾದ ಆವರಣದಲ್ಲಿ ಸಭೆ ನಡೆಯಿತು. ಮುಖಂಡರಾದ ಸರಗೂರು ನಟರಾಜ್, ಮಹದೇವಯ್ಯ, ಮಾಲಿನಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.