ADVERTISEMENT

ಪೋನ್ ಇನ್ ಕಾರ್ಯಕ್ರಮ: ಹಾಡಿ ಜನರ ಸಮಸ್ಯೆ ಆಲಿಸಿದ ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 16:07 IST
Last Updated 1 ಜೂನ್ 2025, 16:07 IST
ಸರಗೂರಿನ ಜನದ್ವನಿ ಬಾನುಲಿ ಕೇಂದ್ರದಲ್ಲಿ ನಡೆದ ಪೋನ್ ಇನ್ ಕಾರ್ಯಕ್ರಮ ದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿದರು
ಸರಗೂರಿನ ಜನದ್ವನಿ ಬಾನುಲಿ ಕೇಂದ್ರದಲ್ಲಿ ನಡೆದ ಪೋನ್ ಇನ್ ಕಾರ್ಯಕ್ರಮ ದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿದರು   

ಸರಗೂರು: ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಅಂಗ-ಸಂಸ್ಥೆ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ಮಳೆ ಪ್ರವಾಹ ಮತ್ತು ಸಾರ್ವಜನಿಕರ ಮುಂಜಾಗ್ರತ ಕ್ರಮಗಳ ಕುರಿತು ಎಚ್.ಡಿ.ಕೋಟೆ ತಾಲ್ಲೂಕಿನ ತಹಶೀಲ್ದಾರ್ ಶ್ರೀನಿವಾಸ್ ಜೊತೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್‌, ಕಳೆದ ಒಂದು ವಾರದಿಂದ ನಿರಂತರವಾಗಿ ತಾಲ್ಲೂಕಿನಲ್ಲಿ ಮಳೆಯಾಗುತ್ತಿದೆ. ಪ್ರವಾಹವಾಗುವ ಸಾಧ್ಯತೆ ಇರುವುದರಿಂದ, ತಾಲ್ಲೂಕು ಆಡಳಿತ ಎಲ್ಲ ರೀತಿಯಲ್ಲೂ ಸಕಲ ವ್ಯವಸ್ಥೆ ಮಾಡಿಕೊಂಡಿದ್ದು, ತಗ್ಗು ಪ್ರದೇಶದಲ್ಲಿ ಮತ್ತು ಕಬಿನಿ ಹಿನ್ನೀರಿನಲ್ಲಿ ವಾಸಿಸುವ ಜನರನ್ನು ಸುರಕ್ಷಿತವಾಗಿ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರಮುಖವಾಗಿ ಕಬಿನಿ ನದಿಯಲ್ಲಿ ನೀರು ಹೆಚ್ಚು ಸಂಗ್ರಹವಾದಂತೆ ಹಿನ್ನೀರಿನ ಅಂಚಿನಲ್ಲಿ ವಾಸಿಸುವ ಡಿ.ಬಿ.ಕುಪ್ಪೆ, ಕಡೆಗದ್ದೆ ಹಾಗೂ ಇನ್ನೂ ಕೆಲವು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಡಿ.ಬಿ. ಕುಪ್ಪೆ ಸರ್ಕಾರಿ ಪ್ರಾಢಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಡಲ್ ಅಧಿಕಾರಿಗಳನ್ನು ನೇಮಿಸಿ ಕಾಳಜಿ ಕೇಂದ್ರಕ್ಕೆ ಬೇಕಾದಂತಹ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ನಿರಂತರ ಮಳೆಯಿಂದ ಕೆಲವು ಮನೆಗಳು ಬಿದ್ದಿವೆ. ಇನ್ನು ಕೆಲವು ಸೋರುತ್ತಿವೆ. ಕೆಲವು ಬೆಳೆಗಳಿಗೂ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಗಮನಕ್ಕೆ ತಂದರೆ ನಮ್ಮ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ, ಸ್ಥಳ ಪರೀಶೀಲಿಸಿ ಸರ್ಕಾರದಿಂದ ಸಿಗುವಂತಹ ಸೌಲಭ್ಯವನ್ನು ತಲುಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ADVERTISEMENT

ಸಮುದಾಯದಿಂದ ಮಾಗುಡಿಲು ನಾಗರಾಜು, ಚಿಕ್ಕೆರೆಯೂರು ಶಂಕರ್, ದೊಡ್ಡಸಿದ್ದನಾಯಕ, ಗಿರಿಜನ ಹಾಡಿಗಳಾದ ಗೋಳೂರು ಹಾಡಿ ಮಂಜುಳಾ, ಬಸವಗಿರಿ ಹಾಡಿ ಸ್ವಾಮಿ, ಹಾಲಹಳ್ಳಿಹಾಡಿ ಮಹದೇವಮ್ಮ, ನಡಹಾಡಿ ರಾಜೇಶ್, ಅರಳಳ್ಳಿಹಾಡಿ ಮಣಿಕಂಠ ಹಾಗೂ ಆನೆಮಾಳ ಹಾಡಿಯ ಕರಿಯಪ್ಪ ಫೋನ್‌ ಕರೆ ಮಾಡಿ, ಗಿರಿಜನ ಹಾಡಿಗಳಲ್ಲಿ ವಾಸಿಸುತ್ತಿರುವ ಹಲನಹ ಮನೆಗಳು ಸೋರುತ್ತಿದ್ದು, ರಸ್ತೆಗಳು ತುಂಬ ಹದೆಗಟ್ಟಿವೆ. ಜೀವನ ನಡೆಸಲು ತುಂಬ ಕಷ್ಟಕರವಾಗಿದೆ ಎಂದು ತಮ್ಮ ಸಮಸ್ಯೆಗಳನ್ನುಅಧಿಕಾರಿಗಳ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರರು, ಇಲಾಖೆಯ ಅಧಿಕಾರಿಗಳನ್ನು ಹಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಲು ಸೂಚಿಸಲಾಗುವುದು. ಜತೆಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಜನಧ್ವನಿ ಬಾನುಲಿ ಕೇಂದ್ರದ ವ್ಯವಸ್ಥಾಪಕ ನಿಂಗರಾಜು ಕಾರ್ಯಕ್ರಮ ನಡೆಸಿಕೊಟ್ಟರು. ಜನಧ್ವನಿ ಬಾನುಲಿ ಕೇಂದ್ರದ ಸಿಬ್ಬಂದಿ ಶ್ರೀಕಾಂತ್, ಅನಿತಾ, ಸ್ಪೂರ್ತಿ ಪ್ರಕಾಶ್, ಪ್ರೀತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.