ADVERTISEMENT

ಪಿರಿಯಾಪಟ್ಟಣ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ–ಆರೋಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 12:29 IST
Last Updated 1 ಡಿಸೆಂಬರ್ 2020, 12:29 IST

ಮೈಸೂರು: ಪಿರಿಯಾಪಟ್ಟಣ ತಾಲ್ಲೂಕು ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯದಿಂದ ನಂದೀಪುರ ಗ್ರಾಮದ ನಿವಾಸಿ ಪದ್ಮಮ್ಮ (60) ಮೃತಪಟ್ಟಿದ್ದಾರೆ ಎಂದು ಇವರ ಸೋದರ ಭಾಸ್ಕರಾಚಾರಿ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಸೆ. 18ರಂದು ಇವರಿಗೆ ಕೊರೊನಾ ಸೋಂಕು ತಗುಲಿದ್ದು, ಮೈಸೂರಿನ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಹೇಳಿ ಪಿರಿಯಾಪ‍ಟ್ಟಣ ತಾಲ್ಲೂಕು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋದರು. 15 ದಿನಗಳ ನಂತರ ಕೋವಿಡ್ ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಅಲ್ಲಿ ಪದ್ಮಮ್ಮ ಹೆಸರಿನ ರೋಗಿ ದಾಖಲಾಗಿಲ್ಲ ಎಂದು ಹೇಳಿದರು. ರಸ್ತೆ ಬದಿಯಲ್ಲಿ ಗುರುತು ಸಿಗದ ಮಹಿಳೆ ಮೃತಪಟ್ಟಿದ್ದು, ಸಂಬಂಧಿಕರು ಸಿಗದ ಕಾರಣ ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ಮೇಟಗಳ್ಳಿ ಪೊಲೀಸರು ತಿಳಿಸಿದ್ದಾರೆ. ಈ ಮಹಿಳೆಯೇ ಪದ್ಮಮ್ಮ ಆಗಿದ್ದು, ಈ ಕುರಿತು ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

‘‌ಆಂಬುಲೆನ್ಸ್‌ನಲ್ಲಿ ಕರೆತಂದ ಚಾಲಕ ಚಂದ್ರು ಅವರನ್ನು ವಿಚಾರಣೆ ಮಾಡಿದ ಪೊಲೀಸರು ಕೇವಲ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕೋವಿಡ್‌ ಎಂದು ಹೇಳಿ ಗಾಬರಿಯಾದ ಅಜ್ಜಿ ತಾಯಮ್ಮ (90) ಸಹ ನಿಧನರಾದರು. ಪತ್ನಿಗೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಈ ಕುರಿತು ನ್ಯಾಯ ಸಿಗಬೇಕು ಎಂದು ಅವರು ಒತ್ತಾಯಿಸಿದರು.

ಪಿರಿಯಾಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಎಲ್ಲರನ್ನೂ ಮೈಸೂರಿನ ಆಸ್ಪತ್ರೆಗೆ ಹೋಗಿ ಎಂದು ಕಳುಹಿಸಲಾಗುತ್ತಿದೆ. ಎಲ್ಲರೂ ಮೈಸೂರಿಗೆ ಬಂದು ಚಿಕಿತ್ಸೆ ಪಡೆಯುವುದಾದರೆ ತಾಲ್ಲೂಕಿನಲ್ಲಿ ಆಸ್ಪತ್ರೆ ಇರುವುದಾದರೂ ಏಕೆ ಎಂದು ಅವರು ಪ್ರಶ್ನಿಸಿದರು.

ಈ ಕುರಿತು ‘ಪ್ರಜಾವಾಣಿ’ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರ್‌ನಾಥ್‌ ಅವರನ್ನು ಸಂಪರ್ಕಿಸಿದಾಗ, ‘ಘಟನೆ ಕುರಿತು ಯಾವುದೇ ದೂರು ಬಂದಿಲ್ಲ. ಬಂದರೆ ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.