ಮೈಸೂರು: ದೇಶದ ಸೂಪರ್ ಸ್ವಚ್ಛ ನಗರ ಲೀಗ್‌ನಲ್ಲಿ 3ನೇ ಸ್ಥಾನ ಪಡೆದಿರುವ ನಗರದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯ ಮರು ಬಳಕೆ ಮಾಡಲು ವರ್ಷದ ಹಿಂದೆ ಪಾಲಿಕೆಯು ರೂಪಿಸಿದ್ದ ಪೆಟ್ ಬಾಟಲ್ ಯೋಜನೆಯು ಹಳ್ಳ ಹಿಡಿದಿದೆ.
ಪಾಲಿಥಿಲೀನ್ ಟೆರಫ್ಥಲೇಟ್ (ಪೆಟ್) ಬಾಟಲ್‌ಗಳ ಮರುಬಳಕೆ ಯಂತ್ರವನ್ನು ನಗರದ ವಿವಿಧೆಡೆ ಅಳವಡಿಸಲು ಉದ್ದೇಶಿಸಲಾಗಿತ್ತು. ಅನುದಾನದ ಕೊರೆತೆಯಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, ದೂರದೃಷ್ಟಿ ಯೋಜನೆ ಆರಂಭಕ್ಕೆ ಪಾಲಿಕೆಗೆ ಇಚ್ಛಾಶಕ್ತಿಯೇ ಇಲ್ಲವೆಂಬುದು ಪರಿಸರ ಪ್ರಿಯರ ದೂರು.
2024 ಜುಲೈ 6ರಂದು ಪಾಲಿಕೆ ಆವರಣದಲ್ಲಿ ಪ್ರಾಯೋಗಿಕವಾಗಿ ಒಂದು ಯಂತ್ರ ಅಳವಡಿಸುವ ಮೂಲಕ ಅಂದಿನ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಚಾಲನೆ ನೀಡಿದ್ದರು. ಆದರಿನ್ನೂ ಕಾರ್ಯಗತಗೊಂಡಿಲ್ಲ.
ನಿತ್ಯ 500 ಟನ್ ತ್ಯಾಜ್ಯ: ನಗರದಲ್ಲಿ ನಿತ್ಯ 500 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ್ದು, ಶೇ 25ರಷ್ಟು ಪಾಲಾಗಿದೆ. ಈ ಹೊರೆ ಕಡಿಮೆ ಮಾಡಲು ಹಾಗೂ ಸ್ವಚ್ಛತೆ ಜಾಗೃತಿಗೆ ಹೊಸ ಯೋಜನೆ ಜಾರಿ ಮಾಡಲಾಗಿತ್ತು.
ಏನಿದು ಯೋಜನೆ: ನಗರದಲ್ಲಿ ಕುಡಿಯುವ ನೀರು, ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲ್‌ಗಳು (ಪೆಟ್ ಬಾಟಲ್) ಹೆಚ್ಚು ಬಳಕೆಯಾಗುತ್ತವೆ. ಆದರೆ, ಇವು ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಅದನ್ನು ತಪ್ಪಿಸಲು ‘ಪೆಟ್ ಬಾಟಲ್’ ಯಂತ್ರ ಅಳವಡಿಸಿ, ಜನರಿಂದಲೇ ಬಾಟಲಿಗಳನ್ನು ಸಂಗ್ರಹಿಸಿ, ಪ್ರತಿಯಾಗಿ ಹಣ ನೀಡುವ ಯೋಜನೆ ಇದು.
ಯಂತ್ರಕ್ಕೆ ಎರಡು ಪ್ಲಾಸ್ಟಿಕ್ ಬಾಟಲ್ ಹಾಕಿದರೆ ₹ 1 ಪ್ರೋತ್ಸಾಹ ಧನ ದೊರೆಯುತ್ತದೆ. ಬಾಟಲ್‌ಗಳನ್ನು ಹಾಕಿದ 25 ಸೆಕೆಂಡ್‌ಗಳಲ್ಲಿ ಯಂತ್ರವು ಬಾಟಲ್ ಅನ್ನು ಸ್ಕ್ಯಾನ್ ಮಾಡಿ ₹1 ನಾಣ್ಯ ಕೊಡುತ್ತದೆ.
ಆರಂಭವಾಗದ ಬಟ್ಟೆ ಬ್ಯಾಗ್ ಯಂತ್ರ: ಪಾಲಿಕೆಯು ಪ್ಲಾಸ್ಟಿಕ್ ಚೀಲಗಳ ಬಳಕೆ ತಗ್ಗಿಸಲು ಹಣ ನೀಡಿದರೆ ಬಟ್ಟೆ ಬ್ಯಾಗ್ ವಿತರಿಸುವ ಯಂತ್ರ ಅಳವಡಿಸಲು ಉದ್ದೇಶಿಸಿದ್ದು, ಅದೂ ಆರಂಭವಾಗಿಲ್ಲ. ಯುಪಿಐ ಮೂಲಕ ಯಂತ್ರದಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ₹10 ಪಾವತಿಸಿ ಅಥವಾ ₹ 10 ಇಲ್ಲವೇ ₹5ರ ಎರಡು ನಾಣ್ಯ ಹಾಕಿದರೆ ಬ್ಯಾಗ್ ದೊರೆಯುತ್ತದೆ. ಈ ಯೋಜನೆಯೂ ಪ್ರಾಯೋಗಿಕ ಹಂತದಲ್ಲಿಯೇ ಸ್ಥಗಿತವಾಗಿದೆ.
ಈ ಎರಡೂ ಬಗೆಯ ಯಂತ್ರಗಳನ್ನು ಪ್ರವಾಸಿ ತಾಣಗಳು, ದೇವಾಲಯ, ಮಾರುಕಟ್ಟೆ ಪ್ರದೇಶಗಳಲ್ಲಿ ಅಳವಡಿಸಲು ಪಾಲಿಕೆ ಉದ್ದೇಶಿಸಿತ್ತು. ಅನುಷ್ಠಾನವಾಗದಿರುವುದು ಸ್ವಚ್ಛ ಮೈಸೂರು ಗುರಿಗೆ ದೊಡ್ಡ ಹಿನ್ನಡೆ.
Highlights - ವರ್ಷದ ಹಿಂದೆ ಪ್ರಾಯೋಗಿಕ ಚಾಲನೆ ಪ್ಲಾಸ್ಟಿಕ್ ಬಾಟಲ್ ಮರು ಬಳಕೆ ಉದ್ದೇಶ ಪ್ಲಾಸ್ಟಿಕ್ ತ್ಯಾಜ್ಯ ತಗ್ಗಿಸುವ ಭರವಸೆ ಹುಸಿ
ಪೆಟ್ ಬಾಟಲ್ ಸ್ವೀಕರಿಸುವ ಹಾಗೂ ಬಟ್ಟೆ ಬ್ಯಾಗ್ ನೀಡುವ ಯಂತ್ರಗಳ ಅಳವಡಿಕೆ ಯೋಜನೆಗಳು ಅನುದಾನ ಕೊರತೆಯಿಂದ ಜಾರಿಯಾಗಿಲ್ಲಡಾ.ವೆಂಕಟೇಶ್ ನಗರ ಪಾಲಿಕೆ ಆರೋಗ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.