ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಗುರುವಾರ ಆಯೋಜಿಸಿದ್ದ ‘ಪಿಎಂಎಫ್‌ಎಂಇ’ ಯೋಜನೆ ಜಾಗೃತಿ ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿದರು
-ಪ್ರಜಾವಾಣಿ ಚಿತ್ರ
ಮೈಸೂರು: ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಲ್ಲಿ ₹ 206 ಕೋಟಿ ಅನುದಾನವಿದ್ದು, ಉದ್ದಿಮೆದಾರರು ಆಹಾರೋದ್ಯಮ ಸ್ಥಾಪಿಸಲು ಯೋಜನೆಯ ಸೌಲಭ್ಯ ಬಳಸಿಕೊಳ್ಳಬೇಕು’ ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯು ಗುರುವಾರ ಆಯೋಜಿಸಿದ್ದ ‘ಪಿಎಂಎಫ್‌ಎಂಇ’ ಯೋಜನೆಯ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗ್ರಾಮೀಣ ಭಾಗದಲ್ಲಿ ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳ ಆಧಾರದಲ್ಲಿ ಸಂಸ್ಕರಣಾ ಉದ್ಯಮ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯಧನ ನೀಡುತ್ತಿವೆ. ಅದನ್ನು ಬಳಸಿಕೊಂಡು ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿಸಲು ಮುಂದಾಗಬೇಕು. ಯೋಜನೆಯಡಿ ₹ 15 ಲಕ್ಷದವರೆಗೂ ಸಹಾಯಧನ ಹಾಗೂ ಶೇ 50 ರಷ್ಟು ಬ್ಯಾಂಕ್ ಸಾಲ ನೀಡಲಾಗುತ್ತಿದೆ. ಹೊಸ ಉದ್ಯಮ ಸ್ಥಾಪನೆಯ ಜೊತೆಗೆ ಈಗಾಗಲೇ ಇರುವ ಉದ್ಯಮ ವಿಸ್ತರಣೆಗೂ ಈ ಯೋಜನೆಯ ಅನುದಾನ ಬಳಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ‘ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ರಾಜ್ಯದ ಪಾಲು ದೊಡ್ಡದಿದೆ. ಕೇಂದ್ರ ₹ 6 ಲಕ್ಷ ನೀಡಿದರೆ, ರಾಜ್ಯ ಸರ್ಕಾರವು ₹ 9 ಲಕ್ಷ ಕೊಡುತ್ತಿದೆ. ಗ್ರಾಮೀಣ ಜನರು ಉದ್ಯೋಗ ಅರಸಿ ನಗರಗಳಿಗೆ ಬರುವುದನ್ನು ತಪ್ಪಿಸಲು ಆಹಾರೋದ್ಯಮಗಳು ಹೆಚ್ಚು ಸ್ಥಾಪನೆಯಾಗಬೇಕು. ಮಹಿಳಾ ಸ್ವಸಹಾಯ ಸಂಘದವರು ಉದ್ಯಮ ಸ್ಥಾಪಿಸಿ, ಸಬಲರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸರ್ಕಾರವು ಅಗತ್ಯ ಪ್ರೋತ್ಸಾಹ ನೀಡುತ್ತಿದೆ’ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತಿ ಸಿಇಒ ಎಸ್.ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವಕುಮಾರ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಪಿ.ಕೃಷ್ಣಮೂರ್ತಿ, ಕೃಷಿ ಅಧಿಕಾರಿ ವೆಂಕಟೇಶ್ ಪಾಲ್ಗೊಂಡಿದ್ದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಮಾತನಾಡಿ ‘ಆತ್ಮನಿರ್ಭರ ಭಾರತ ಅಭಿಯಾನದಡಿ ಸ್ಥಳೀಯ ಆರ್ಥಿಕತೆ ಬಲವರ್ಧನೆಗೆ ‘ಒಂದು ಜಿಲ್ಲೆ– ಒಂದು ಉತ್ಪನ್ನ’ ಯೋಜನೆಯಿತ್ತು. ಇದೀಗ ‘ಒಂದು ಜಿಲ್ಲೆ– ಹಲವು ಉತ್ಪನ್ನ’ ಯೋಜನೆಯಡಿ ಸಾಕಷ್ಟು ಉದ್ಯಮಗಳು ಪ್ರಾರಂಭವಾಗಿವೆ. 5 ವರ್ಷದಲ್ಲಿ 131 ಮಂದಿ ಉದ್ದಿಮೆದಾರರಾಗಿ ಹೊಮ್ಮಿದ್ದಾರೆ. 15 ದಿನದಿಂದ ಜಾಗೃತಿ ಮೂಡಿಸಲಾಗುತ್ತಿದ್ದು ಉದ್ಯಮ ಆರಂಭಕ್ಕೆ 102 ಮಂದಿ ಅರ್ಜಿ ಸಲ್ಲಿಸಿದ್ದಾರೆ’ ಎಂದರು. ‘102 ಅರ್ಜಿಗಳಲ್ಲಿ 22 ಹಿಟ್ಟಿನ ಗಿರಣಿ 10 ತೆಂಗು 9 ಸಿರಿಧಾನ್ಯ 6 ಎಣ್ಣೆಕಾಳು 10 ಬೇಕರಿ 2 ಮತ್ಸ್ಯ 2 ಶುಂಠಿ 2 ಬೆಲ್ಲ 2 ಉಪ್ಪಿನಕಾಯಿ 2 ಅಕ್ಕಿ ಉತ್ಪನ್ನಗಳ ಉದ್ದಿಮೆ ಸ್ಥಾಪನೆಯಾಗುತ್ತಿವೆ. ಉದ್ದಿಮೆದಾರಿಗೆ ಅಗತ್ಯ ಸಾಲ ನೀಡಲು ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.