ADVERTISEMENT

ಕವಿತೆಗಳು ಸ್ಫೂರ್ತಿಯ ಸೆಲೆ

ದಸರಾ ಕವಿಗೋಷ್ಠಿಯಲ್ಲಿ ಗುಬ್ಬಿಗೂಡು ರಮೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 1:26 IST
Last Updated 23 ಅಕ್ಟೋಬರ್ 2020, 1:26 IST
ಶಾಸಕ ಎಲ್‌.ನಾಗೇಂದ್ರ ಅವರು ಕವಿಗೋಷ್ಠಿ ಉದ್ಘಾಟಿಸಿದರು. ಗುಬ್ಬಿಗೂಡು ರಮೇಶ್‌, ವೈ.ಡಿ.ರಾಜಣ್ಣ, ಕೆ.ಎಸ್‌.ಶಿವರಾಮು, ಚಂದ್ರಶೇಖರ್‌, ಮೂಗೂರು ನಂಜುಂಡಸ್ವಾಮಿ ಇದ್ದಾರೆ
ಶಾಸಕ ಎಲ್‌.ನಾಗೇಂದ್ರ ಅವರು ಕವಿಗೋಷ್ಠಿ ಉದ್ಘಾಟಿಸಿದರು. ಗುಬ್ಬಿಗೂಡು ರಮೇಶ್‌, ವೈ.ಡಿ.ರಾಜಣ್ಣ, ಕೆ.ಎಸ್‌.ಶಿವರಾಮು, ಚಂದ್ರಶೇಖರ್‌, ಮೂಗೂರು ನಂಜುಂಡಸ್ವಾಮಿ ಇದ್ದಾರೆ   

ಮೈಸೂರು: ಸರ್ಕಾರಗಳು ಮನುಷ್ಯನಿಗೆ ವಿವಿಧ ರೀತಿಯ ಅನುಕೂಲ ಕಲ್ಪಿಸಿಕೊಡಬಹುದು. ಆದರೆ, ಮಾನಸಿಕ ನೆಮ್ಮದಿಯನ್ನು ಕವಿಗಳಿಂದ ಮಾತ್ರವೇ ಕೊಡಲು ಸಾಧ್ಯ. ಕವಿತೆಗಳು ಇಂದಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದು ಬರಹಗಾರ ಗುಬ್ಬಿಗೂಡು ರಮೇಶ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಸಾಪ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಸರಾ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ತಂತ್ರಜ್ಞಾನ ಬಹಳಷ್ಟು ಬದಲಾದರೂ, ಬರವಣಿಗೆಗೆ ಆದ್ಯತೆ ಇದೆ. ಬರಹಗಾರರು, ಕವಿಗಳು ಸಾಮಾಜಿಕ ಮಾಧ್ಯಮಗಳು ಮತ್ತು ಜಾಲತಾಣಗಳಲ್ಲಿ ರಾರಾಜಿಸುತ್ತಿರುವುದು ಇದಕ್ಕೆ ಸಾಕ್ಷಿ. ಬರಹಕ್ಕೆ ಎಂದಿಗೂ ಸಾವಿಲ್ಲ. ಕಾವ್ಯ ರಚನೆಯಲ್ಲಿ ಆತ್ಮಸಂತೋಷ ಮತ್ತು ಮನೋವಿಕಾಸ ಅಡಗಿದೆ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಈ ಹಿಂದೆ ನಡೆದ ಹಲವು ಹೋರಾಟ, ಚಳವಳಿಗಳಲ್ಲಿ ಕಾವ್ಯದ ಕಾವು ಕಾಣಬಹುದಿತ್ತು. ಆದರೆ, ಇಂದು ಕವಿಗಳು ಲೇಖನಿ ಹಿಡಿಯುತ್ತಿದ್ದಂತೆ, ಸಮಾಜಕ್ಕೆ ಬುದ್ಧಿ ಹೇಳಲು ಮುಂದಾಗುತ್ತಾರೆ. ಇದು ಸರಿಯಾದ ಕ್ರಮ ಅಲ್ಲ. ಕವಿಯ ಆತ್ಮಸುಖ ಮತ್ತು ಮನೋವಿಕಾಸ ಕವಿತೆಯ ಉದ್ದೇಶವಾಗಿರಬೇಕು ಎಂದು ಸಲಹೆ ನೀಡಿದರು.

ಕವಿಗಳಾದ ವೈ.ಎಸ್.ಅಭಿಷೇಕ್, ಅಶ್ವಿನಿ ಜಿ.ಮಂಡ್ಯ, ಎಡೆಯೂರು ಸಮೀವುಲ್ಲಾ, ಪ್ರಸನ್ನ ಹೆಗಡೆ, ರಮ್ಯಶ್ರೀ ಅಡಗೂರು, ಸುಶ್ಮಿತಾ ಸುಖೀಭವ, ಅರ್ಜುನ್, ಎ.ಎಸ್.ಗೋವಿಂದೇಗೌಡ, ಪಿ.ಮಹೇಶ್‍ಕುಮಾರ್, ಡಾ. ಕೃಷ್ಣಮೂರ್ತಿ ಚಮರಂ, ಅನ್ನಪೂರ್ಣ ನಂಜನಗೂಡು, ಶಶಿಧರ್ ಸಬ್ಬನಹಳ್ಳಿ, ಎಸ್.ಶಶಿರಂಜನ್, ಮೈ.ನಾ.ಲೋಕೇಶ್, ಭಾರತಿ ಪ್ರಸಾದ್, ಎಚ್.ಎನ್.ವಿಜಯ್, ಸೌಗಂಧಿಕಾ ಜೋಯಿಸ್, ಟಿ.ಲೋಕೇಶ್ ಹುಣಸೂರು, ಎಂ.ಯು. ಶ್ವೇತಾ ಮಂಡ್ಯ, ಬೆಮೆಲ್ ರಮೇಶ್ ಶೆಟ್ಟಿ, ಕೆ.ಎಸ್.ಪ್ರದೀಪ್‍ಕುಮಾರ್, ಎಂ.ಬಿ.ವಿನಯ್‍ಕುಮಾರ್ ಕವಿತೆಗಳನ್ನು ವಾಚಿಸಿದರು.

ಶಾಸಕ ಎಲ್.ನಾಗೇಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕದಂಬ ರಂಗ ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ, ಕವಿ ಜಯಪ್ಪ ಹೊನ್ನಾಳಿ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.