ADVERTISEMENT

ಪೊಲೀಸರ ಬಲೆಗೆ ಇಬ್ಬರು ಸರಗಳ್ಳರು

​ಪ್ರಜಾವಾಣಿ ವಾರ್ತೆ
Published 22 ಮೇ 2019, 20:18 IST
Last Updated 22 ಮೇ 2019, 20:18 IST

ಮೈಸೂರು: ಇಲ್ಲಿನ ನರಸಿಂಹರಾಜ ಠಾಣೆಯ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿ, ₹ 2.20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ₹ 30 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.‌

ಕಲ್ಯಾಣಗಿರಿ ನಿವಾಸಿ ಮಹಮ್ಮದ್ ಇಬ್ರಾಹಿಂ (24) ಹಾಗೂ ಗೌಸಿಯಾನಗರದ ನಿವಾಸಿ ಮಹಮ್ಮದ್ ಇಮ್ರಾನ್ (30) ಬಂಧಿತ ಆರೋಪಿಗಳು.

ಇವರು ಕಳವು ಮಾಡಿದ್ದ 65 ಗ್ರಾಂ ತೂಕದ ಚಿನ್ನಾಭರಣಗಳನ್ನು ಉದಯಗಿರಿಯಲ್ಲಿ ಮಾರಾಟ ಮಾಡಲು ಯತ್ನಿಸಿದಾಗ ಅಂಗಡಿಯವರಿಗೆ ಅನುಮಾನ ಬಂದು ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಪತ್ತೆಯಾಗಿದೆ.

ADVERTISEMENT

ಜ. 5ರಂದು ಕರುಣಾಪುರ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರಿಂದ, ಆರ್.ಎಸ್.ನಾಯ್ಡುನಗರದ ಡೋಬಿಘಾಟ್‌ ಬಳಿ ಫೆ. 06ರಂದು ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರಿಂದ ಚಿನ್ನದ ಸರವನ್ನು ಇವರು ಕಳವು ಮಾಡಿದ್ದರು.

ಜತೆಗೆ, ಕೆ.ಆರ್.ಮೊಹಲ್ಲಾದ ರಾಮಾನುಜರಸ್ತೆಯಲ್ಲಿ ದ್ವಿಚಕ್ರವಾಹನವೊಂದನ್ನು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎನ್.ಆರ್.ಠಾಣೆಯ ಇನ್‌ಸ್ಪೆಕ್ಟರ್ ಬಿ.ಬಸವರಾಜು, ಪಿಎಸ್‌ಐ ಆನಂದ್, ಸಿಬ್ಬಂದಿಯಾದ ರಮೇಶ್, ಮಂಜುನಾಥ್, ಮಹದೇವ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.