ADVERTISEMENT

‘ರಾಜಕೀಯ ರಾಜಾ ಹುಲಿ ಎಸ್.ಬಂಗಾರಪ್ಪ‘ ಪುಸ್ತಕ ಬಿಡುಗಡೆ

‘ಸುವರ್ಣಯುಗ; ಕನ್ನಡಿಗರ ಹಿತ ಕಾಪಾಡಿದವರು’– ಜ್ಞಾನಪ್ರಕಾಶ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 15:42 IST
Last Updated 25 ಆಗಸ್ಟ್ 2019, 15:42 IST
ಮೈಸೂರಿನ ಕಿರುರಂಗಮಂದಿರದಲ್ಲಿ ಭಾನುವಾರ ‘ರಾಜಕೀಯ ರಾಜಾ ಹುಲಿ ಎಸ್.ಬಂಗಾರಪ್ಪ’ ಪುಸ್ತಕ ಬಿಡುಗಡೆ ಮಾಡಲಾಯಿತು
ಮೈಸೂರಿನ ಕಿರುರಂಗಮಂದಿರದಲ್ಲಿ ಭಾನುವಾರ ‘ರಾಜಕೀಯ ರಾಜಾ ಹುಲಿ ಎಸ್.ಬಂಗಾರಪ್ಪ’ ಪುಸ್ತಕ ಬಿಡುಗಡೆ ಮಾಡಲಾಯಿತು   

ಮೈಸೂರು: ‘ಎಸ್‌.ಬಂಗಾರಪ್ಪ ಪ್ರಬುದ್ಧ, ಧೀಮಂತ ರಾಜಕಾರಣಿ. ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕರ್ನಾಟಕಕ್ಕೆ ಸುವರ್ಣಯುಗದ ಆಡಳಿತ ನೀಡಿದವರು’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಕಿರುರಂಗಮಂದಿರದಲ್ಲಿ ಭಾನುವಾರ ನಡೆದ ‘ರಾಜಕೀಯ ರಾಜಾ ಹುಲಿ ಎಸ್.ಬಂಗಾರಪ್ಪ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಮ್ಮ ಅಧಿಕಾರದ ಅವಧಿಯಲ್ಲಿ ಆಗಿನ ಪ್ರಧಾನಿ, ಕಾವೇರಿ ಪ್ರಾಧಿಕಾರಕ್ಕೂ ಸೆಡ್ಡು ಹೊಡೆದು, ಕನ್ನಡಿಗರ ಹಿತ ಕಾಪಾಡಿದ ನಿಜವಾದ ರಾಜಕೀಯ ರಾಜಾ ಹುಲಿ’ ಎಂದು ಬಣ್ಣಿಸಿದರು.

‘ಈಚೆಗೆ ಎಲ್ಲರಿಗೂ ರಾಜಾ ಹುಲಿ ಎನ್ನಲಾಗುತ್ತಿದೆ. ರಾಜೀನಾಮೆ ನೀಡಿ ಬಾಂಬೆಯ ಬಿಲ ಸೇರಿದ್ದ ಶಾಸಕರಿಗೂ ಈ ಪದ ಬಳಸಬೇಕೇ. ರಾಜೀನಾಮೆ ನೀಡಿದವರು ಬಾಂಬೆಯ ಬಿಲ ಹೊಕ್ಕದೇ ತಮ್ಮ ಕ್ಷೇತ್ರಗಳಿಗೆ ಮರಳಿದ್ದರೆ, ನಿಜವಾಗಿಯೂ ಹುಲಿಗಳಾಗುತ್ತಿದ್ದರು. ಇವರೆಲ್ಲಾ ಫೋಕಸ್ ಹುಲಿಗಳಷ್ಟೇ’ ಎಂದು ಅನರ್ಹ ಶಾಸಕರನ್ನು ಪ್ರಸ್ತಾಪಿಸಿದೆ ಪರೋಕ್ಷವಾಗಿ ಟೀಕಿಸಿದರು.

ADVERTISEMENT

‘ನೈತಿಕ ಮೌಲ್ಯವೇ ಇಲ್ಲದ ರಾಜಕಾರಣದಲ್ಲಿ ನಾವಿದ್ದೇವೆ. ಇಂತಹ ಹೊತ್ತಲ್ಲಿ ಬಂಗಾರಪ್ಪ ಅವರನ್ನು ಸ್ಮರಿಸೋದು ಸಮಸ್ತ ಕನ್ನಡಿಗರಿಗೆ ನೀಡುವ ಗೌರವ. ತಾಂತ್ರಿಕ ರಾಜಕಾರಣದಲ್ಲೂ; ತಾತ್ವಿಕ ರಾಜಕಾರಣ ನಡೆಸಿದ ಬೆರಳೆಣಿಕೆಯವರಲ್ಲಿ ಬಂಗಾರಪ್ಪ ಸಹ ಒಬ್ಬರು’ ಎಂದು ಸ್ವಾಮೀಜಿ ಹೇಳಿದರು.

‘ಮಾತೃ ಹೃದಯಿಯಾಗಿದ್ದ ಬಂಗಾರಪ್ಪ ದೇಶಕ್ಕಾಗಿ ದುಡಿಯೋದೇ ಬದ್ಧತೆಯ ರಾಜಕಾರಣ ಎಂದು ತಿಳಿದಿದ್ದರು. ಬಗರ್‌ಹುಕುಂ ಸಾಗುವಳಿ ಜಮೀನನ್ನು ದಲಿತರಿಗೆ ಮೊದಲು ನೀಡಿದ್ದೇ ಬಂಗಾರಪ್ಪ. ಇವರನ್ನು ನೆನೆಯದಿದ್ದರೇ ರಾಜ್ಯಕ್ಕೆ ದ್ರೋಹ ಬಗೆದಂತಾಗುತ್ತದೆ’ ಎಂದರು.

ಡಾ.ಎಂ.ಎಸ್.ಮಹದೇವಸ್ವಾಮಿ ಪುಸ್ತಕದ ಕುರಿತಂತೆ ಮಾತನಾಡಿದರು. ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆಯ ಮಾಜಿ ಸದಸ್ಯ ಪಿ.ದೇವರಾಜು, ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಎಂ.ಸಿದ್ದರಾಜು, ಬನ್ನೂರು ಕೆ.ರಾಜು, ನೀಲಕಂಠ, ಕೆ.ವಿ.ಶ್ರೀಕಾಂತ್, ಪುಸ್ತಕದ ಲೇಖಕ ಗಾಗೇನಹಳ್ಳಿ ಕೃಷ್ಣಮೂರ್ತಿ, ಸಾನ್ವಿಪ್ರಿಯಾ ಪಬ್ಲಿಕೇಷನ್‌ನ ಎಚ್‌.ಡಿ.ಲೋಕೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.