ADVERTISEMENT

ಉಪಚುನಾವಣೆ | 15 ಕ್ಷೇತ್ರಗಳಲ್ಲೂ ಜೆಡಿಎಸ್‌ ಸ್ಪರ್ಧೆ: ಕುಮಾರಸ್ವಾಮಿ

‘ರಾಜ್ಯ ರಾಜಕೀಯದಲ್ಲಿ ಬದಲಾವಣೆ‘

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 10:09 IST
Last Updated 21 ಸೆಪ್ಟೆಂಬರ್ 2019, 10:09 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಮೈಸೂರು: ಮುಂಬರುವ ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಜೆಡಿಎಸ್‌ ‍ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಶಾಸಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಇಲ್ಲಿ ತಿಳಿಸಿದರು.

‘ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, 8ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಉಪಚುನಾವಣೆ ಫಲಿತಾಂಶದ ಮೇಲೆ ರಾಜ್ಯದ ರಾಜಕೀಯದಲ್ಲಿ ಬದಲಾವಣೆಯಾಗಲಿದೆ. ಜೆಡಿಎಸ್‌, ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆದ್ದರೆ ಬಿಜೆಪಿ ಸರ್ಕಾರ ಬಿದ್ದು ಹೋಗಲಿದೆ’ ಎಂದರು.

‘ನಾನು ನಡೆಸಿದ್ದೂ ಕೆಟ್ಟ ಸರ್ಕಾರವೇ. ಕಾಂಗ್ರೆಸ್‌ ಜೊತೆಗೂಡಿ ಸರ್ಕಾರ ರಚಿಸಿದ್ದರಿಂದ ಜೆಡಿಎಸ್‌ ಕಾರ್ಯಕರ್ತರು ನನ್ನಿಂದ ದೂರವಾದರು. ರೈತರ ಸಾಲಮನ್ನಾ ಮಾಡುವ ಏಕೈಕ ಉದ್ದೇಶದಿಂದ ಸಂಕಷ್ಟಗಳ ನಡುವೆಯೇ ಸಮ್ಮಿಶ್ರ ಸರ್ಕಾರ ನಡೆಸಿದೆ. ರೈತರು, ಬಡವರಿಗಾಗಿ ಸಾಕಷ್ಟು ಯೋಜನೆ ರೂಪಿಸಿದರೂ ಪ್ರಚಾರ ಸಿಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್‌ನ ಕೆಲ ನಾಯಕರಿಗೆ ಬಿಜೆಪಿಗಿಂತ ಜೆಡಿಎಸ್‌ ಮೊದಲ ಶತ್ರುವಾಗಿದೆ. ಜೆಡಿಎಸ್‌ ಮುಗಿಸಲು ಹುನ್ನಾರ ನಡೆಸಿದ್ದಾರೆ’ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ನ ರಾಜ್ಯ ನಾಯಕರು ಈಗಾಗಲೇ ಸಭೆ ನಡೆಸಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂಬುದಾಗಿ ನಿರ್ಧರಿಸಿದ್ದಾರೆ. ಹೊಂದಾಣಿಕೆ ಮಾಡಿಕೊಳ್ಳಲು ನಾವು ಕೂಡ ಇಷ್ಟಪ‍ಡುವುದಿಲ್ಲ’ ಎಂದರು.

‘ಆಡಳಿತರೂಢ ಬಿಜೆಪಿ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿರುವ ವಿಷಯ ಮುಂದಿಟ್ಟುಕೊಂಡೇ ನಾವು ಉಪಚುನಾವಣೆ ಎದುರಿಸುತ್ತೇವೆ. ಪ್ರಧಾನಿ ಅಮೆರಿಕಕ್ಕೆ ಹೋಗಿ ಸಾವಿರಾರು ಕೋಟಿ ಖರ್ಚು ಮಾಡುತ್ತಾರೆ. ಆದರೆ, ಪ್ರವಾಹದಿಂದ ಬೀದಿಗೆ ಬಿದ್ದಿರುವ ಜನರ ಕಷ್ಟ ಆಲಿಸಲು ಅವರಿಗೆ ಸಮಯವಿಲ್ಲ. ಕಾರ್ಪೊರೇಟ್‌ ಕಂಪನಿಗಳ ತೆರಿಗೆ ಕಡಿಮೆ ಮಾಡುತ್ತಾರೆ. ಆದರೆ, ಸಂತ್ರಸ್ತರಿಗೆ ಹಣ ಕೊಡುತ್ತಿಲ್ಲ. ಸಮ್ಮಿಶ್ರ ಸರ್ಕಾರ ಕೆಡವಲು ಪಾಪದ ಹಣ ವೆಚ್ಚ ಮಾಡಿದರು. ನೆರೆ ಪರಿಹಾರಕ್ಕೆ ಹಣ ನೀಡಿಲ್ಲ’ ಎಂದು ಟೀಕಿಸಿದರು.

‘ಬೆಳಗಾವಿ, ಬಾಗಲಕೋಟೆ, ಹಾವೇರಿಯಲ್ಲಿ ಪ್ರವಾಹ ಸಂತ್ರಸ್ತರು ರಸ್ತೆಯಲ್ಲಿ, ಬಸ್‌ ನಿಲ್ದಾಣಗಳಲ್ಲಿ ಮಲಗಿದ್ದಾರೆ. ಅವರಿಗೆ ಯಾವ ಜಾತಿ ಇದೆ. ಅವರಲ್ಲಿ ಲಿಂಗಾಯತರೂ ಇದ್ದಾರೆ. ಸರ್ಕಾರದ ಮೇಲೆ ಅವರಿಗೆ ಎಷ್ಟೊ ಆಕ್ರೋಶವಿದೆ ಎಂಬುದು ಸಚಿವ ಜಗದೀಶ ಶೆಟ್ಟರ್‌ ವಿರುದ್ಧ ಘೋಷಣೆ ಕೂಗಿದಾಗಲೇ ಗೊತ್ತಾಗಿದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.