ADVERTISEMENT

ಕಾಯಂ ನೇಮಕಾತಿ ಮಾಡದಿದ್ದಲ್ಲಿ ದಸರೆಗೆ ಬಹಿಷ್ಕಾರ

ಪೌರಕಾರ್ಮಿಕರಿಂದ ಬೃಹತ್‌ ಮೆರವಣಿಗೆ, ಪ್ರತಿಭಟನೆ; ಕಾಯಂ ನೇಮಕಾತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 11:11 IST
Last Updated 19 ಸೆಪ್ಟೆಂಬರ್ 2018, 11:11 IST
ಪೌರಕಾರ್ಮಿಕರ ಕಾಯಂ ನೇಮಕಾತಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು
ಪೌರಕಾರ್ಮಿಕರ ಕಾಯಂ ನೇಮಕಾತಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು   

ಮೈಸೂರು: ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳೇ ನೇರ ವೇತನ ನೀಡುವಂತೆ ಆಗ್ರಹಿಸಿ ಪೌರಕಾರ್ಮಿಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾಕಾರಿ ಕಚೇರಿ ಎದುರು ಸಮಾವೇಶಗೊಂಡ ಪೌರಕಾರ್ಮಿಕರು, ಗುತ್ತಿಗೆ ಪದ್ಧತಿಯನ್ನು ಕೂಡಲೇ ರದ್ದುಪಡಿಸಬೇಕು. ರಾಜ್ಯ ಸರ್ಕಾರದ ಆದೇಶವಿದ್ದರೂ ಗುತ್ತಿಗೆ ಪದ್ಧತಿ ಮುಂದುವರಿಸುತ್ತಿರುವ ಸ್ಥಳೀಯ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂಯ್ರಿಯಾಗಿದ್ದಾಗ ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಕಾಯಂ ನೇಮಕಾತಿ ಮಾಡುವುದಾಗಿ ನಿರ್ಣಯವಾಗಿದೆ. ಆದರೆ, ಅದು ಇದುವರೆಗೂ ಜಾರಿಯಾಗಿಲ್ಲ. ಈ ಕುರಿತು ಸರ್ಕಾರಕ್ಕೆ ಸತತ ಮನವಿ ಸಲ್ಲಿಸಿದ್ದರೂ ವಿಮುಖ ನೀತಿ ಅನುಸರಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರವು ಗಂಭೀರವಾದ ನಿರ್ಣಯ ಕೈಗೊಳ್ಳದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಕಿಡಿಕಾರಿದರು.

ADVERTISEMENT

‘ಈ ಕೂಡಲೇ ಎಲ್ಲ ಪೌರಕಾರ್ಮಿಕರ ಕಾಯಂ ನೇಮಕಾತಿ ಆಗಬೇಕು. ಇಲ್ಲವಾದಲ್ಲಿ ಈ ಬಾರಿಯ ದಸರೆಗೆ ಸ್ವಚ್ಛತಾ ಕಾರ್ಯವನ್ನು ಬಹಿಷ್ಕರಿಸಿ ಅಸಹಕಾರ ಚಳವಳಿ ನಡೆಲಾಗುವುದು. ಇಲ್ಲವಾದಲ್ಲಿ ನಮ್ಮ ಸಮಸ್ಯೆಯ ಗಾಂಭೀರ್ಯತೆ ಸರ್ಕಾರದ ಅರಿವಿಗೆ ಬರುವುದಿಲ್ಲ’ ಎಂದು ಎಚ್ಚರಿಸಿದರು.

ಪ್ರತಿ 500 ಜನಕ್ಕೆ ಒಬ್ಬರಂತೆ ಪೌರಕಾರ್ಮಿಕರನ್ನು ನೇಮಿಸಬೇಕು. ಬೆಳಗಿನ ಉಪಹಾರ ಯೋಜನೆ ಜಾರಿಗೊಳಿಸಿ, ತಿಂಗಳಿಗೆ ₹ 600 ಭತ್ಯೆ ನೀಡಬೇಕು. ಪೌರಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಮೀಸಲಾತಿ ಹಣದಲ್ಲಿ ಶೇ 20ರಷ್ಟು ಮೀಸಲಿಡಬೇಕು. ಬಿಬಿಎಂಪಿ ಮಾದರಿಯಲ್ಲಿ ಅಂಬೇಡ್ಕರ್ ಜಯಂತಿ ವೇಳೆ ₹ 20 ಸಾವಿರ ಬೋನಸ್ ನೀಡಬೇಕು. ಹಬ್ಬದ ಸಂದರ್ಭದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ವರ್ಷಕ್ಕೆ 30 ದಿನಗಳ ವೇತನ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ನೂರಾರು ಪೌರಕಾರ್ಮಿಕರು ನಗರದ ಪುರಭವನ ಎದುರಿನಿಂದ ಜಿಲ್ಲಾಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಹಾಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ, ಜಿಲ್ಲಾಧ್ಯಕ್ಷ ಮಂಚಯ್ಯ, ಮುಖಂಡರಾದ ಎನ್.ನರಸಿಂಹ, ಅರುಣ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.