ADVERTISEMENT

ಪ್ರಜಾವಾಣಿ @75 | ಪರಿಸರ ಸಂರಕ್ಷಣೆಯಿಂದ ಹೃದಯ ಸಂರಕ್ಷಣೆ: ಡಾ. ಸದಾನಂದ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 8:02 IST
Last Updated 26 ಆಗಸ್ಟ್ 2023, 8:02 IST
ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಶನಿವಾರ ಪಿವಿ@75 ಹಾಗೂ ರಾಷ್ಟ್ರೀಯ ಪತ್ರಿಕಾ ವಿತರಕರ ದಿನದ ‌ಪ್ರಯುಕ್ತ ಪತ್ರಿಕಾ ವಿತರಕರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ವಿತರಕ ರೇವಣ್ಣ ಉದ್ಘಾಟಿಸಿದರು.
ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಶನಿವಾರ ಪಿವಿ@75 ಹಾಗೂ ರಾಷ್ಟ್ರೀಯ ಪತ್ರಿಕಾ ವಿತರಕರ ದಿನದ ‌ಪ್ರಯುಕ್ತ ಪತ್ರಿಕಾ ವಿತರಕರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ವಿತರಕ ರೇವಣ್ಣ ಉದ್ಘಾಟಿಸಿದರು.   

ಮೈಸೂರು: ‘ಜೀವನಶೈಲಿ, ಆಹಾರಪದ್ಧತಿಯಿಂದಷ್ಟೇ ಅಲ್ಲದೆ, ಪರಿಸರ ಮಾಲಿನ್ಯದಿಂದಲೂ ಹೃದಯರೋಗಗಳು ಬರುತ್ತವೆ. ಹೀಗಾಗಿ ನಮ್ಮ ಹೃದಯವನ್ನು ಕಾಪಾಡಿಕೊಳ್ಳುವ ರೀತಿಯಲ್ಲೇ ಪರಿಸರವನ್ನು ಕಾಪಾಡಬೇಕು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಮೆಡಿಕಲ್‌ ಸೂಪರಿಂಟೆಂಡೆಂಟ್ ಡಾ.ಕೆ.ಎಸ್‌.ಸದಾನಂದ ಸಲಹೆ ನೀಡಿದರು.

ರಾಷ್ಟ್ರೀಯ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಶನಿವಾರ ನಗರದ ಪತ್ರಿಕಾ ವಿತರಕರಿಗೆ ಜಯದೇವ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ‘ಪರಿಸರ ಮಲಿನಗೊಂಡಿದೆ. ಉತ್ತಮ ಗಾಳಿ ದೊರಕುತ್ತಿಲ್ಲ. ವಾಯು ಮಾಲಿನ್ಯದೊಂದಿಗೆ ಜಲಮಾಲಿನ್ಯವೂ ಸೇರಿಕೊಂಡಿದೆ. ಕಲುಷಿತ ಆಹಾರದೊಂದಿಗೆ, ಕಲುಷಿತ ನೀರು, ಗಾಳಿ ಸೇವನೆಯೂ ಆರೋಗ್ಯದ ಮೇಲೆ ಮಾರಕ ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ಪರಿಸರ ಮಾಲಿನ್ಯವಾಗದಂತೆಯೂ ಎಚ್ಚರ ವಹಿಸಬೇಕು. ಅಂಥ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು’ ಎಂದರು.

‘ಹಲವು ದೇಶಗಳಲ್ಲಿ ಇಂದು ಪರಿಸರ ಮಾಲಿನ್ಯ ತಡೆಗಟ್ಟಲೆಂದೇ ಬಹುತೇಕರು ಬೈಸಿಕಲ್‌ ಬಳಸುತ್ತಾರೆ. ಆದರೆ ನಮ್ಮಲ್ಲಿ ಪ್ರತಿಯೊಂದಕ್ಕೂ ಇಂಧನ ಚಾಲಿತ ವಾಹನಗಳ ಅವಲಂಬನೆಯೇ ಹೆಚ್ಚಿದೆ’ ಎಂದರು.

ADVERTISEMENT

‘ವಿತರಕರು ಬೆಳಗಿನ ಜಾವದಲ್ಲೇ ಕೆಲಸ ಶುರು ಮಾಡಬೇಕಾಗಿರುವುದರಿಂದ, ಚಳಿಯ ವಾತಾವರಣದಲ್ಲೇ ಇರಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಬದಲಾದ ಆಹಾರ ಪದ್ಧತಿ, ಜೀವನ ಶೈಲಿ, ಧಾವಂತದ ಬದುಕು, ದೇಹ–ಮನಸ್ಸಿಗೆ ಬೇಕಾದಷ್ಟು ವಿಶ್ರಾಂತಿ ಸಿಗದಿರುವುದು, ಒತ್ತಡದಿಂದ ಆರೋಗ್ಯ ಹದಗೆಡುತ್ತದೆ. ಇಂಥ ಸನ್ನಿವೇಶದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವುದು ಬಹಳ ಮುಖ್ಯ’ ಎಂದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಪತ್ರಿಕಾ ವಿತರಕರು

‘ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆಯ ಜೊತೆಗೆ, ವೈದ್ಯರೊಂದಿಗೆ ಆಪ್ತ ಸಮಾಲೋಚನೆಯೂ ನಡೆಯುತ್ತದೆ. ಹೆಚ್ಚುವರಿ ತಪಾಸಣೆ ಅಗತ್ಯವಿದ್ದರೆ, ಅದನ್ನೂ ಉಚಿತವಾಗಿ ಮಾಡಲಾಗುವುದು’ ಎಂದರು.

ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್‌ ಆಫೀಸರ್‌ ಡಾ.ಎಂ.ಪಶುಪತಿ, ನರ್ಸಿಂಗ್‌ ಸುಪರಿಂಟೆಂಡೆಂಟ್‌ ಹರೀಶ್‌ಕುಮಾರ್, ಟಿಪಿಎಂಎಲ್‌ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾ‍ಪಕ ಕಿರಣ್‌, ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ್ ಜೋಯಿಸ್, ಮೈಸೂರು ವಿಭಾಗದ ವ್ಯವಸ್ಥಾಪಕ ಎಸ್‌.ಪ್ರಕಾಶ, ‘ಪ್ರಜಾವಾಣಿ’ ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಬ್ಯೂರೋ ಮುಖ್ಯಸ್ಥ ಟಿ.ಆರ್.ಸತೀಶ್‌ಕುಮಾರ್‌ ಉಪಸ್ಥಿತರಿದ್ದರು.

‘ಪ್ರಜಾವಾಣಿ @75’ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ ನಗರದ ಕೆ.ಆರ್.ವೃತ್ತದ ವಿತರಣಾ ಕೇಂದ್ರ ವ್ಯಾಪ್ತಿಯ ವಿತರಿಕರು ಹಾಗೂ ಕುಟುಂಬದ ಸದಸ್ಯರು ಆರೋಗ್ಯ ತಪಾಸಣೆಗೆ ಒಳಗಾದರು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ಆಸ್ಪತ್ರೆಯ ಸಿಬ್ಬಂದಿ ತಪಾಸಣೆ ನಡೆಸಿದರು.

ಆ.30ರಂದು ಸರಸ್ವತಿಪುರಂ, ಒಂಟಿಕೊಪ್ಪಲು ಮತ್ತು ಹೂಟಗಳ್ಳಿ ವಿತರಣಾ ಕೇಂದ್ರ ವ್ಯಾಪ್ತಿಯ ವಿತರಕರಿಗೆ ಆರೋಗ್ಯ ತಪಾಸಣೆ ನಡೆಯಲಿದೆ. ‌

25 ವರ್ಷದಿಂದ ವಿತರಕನಾಗಿರುವೆ. ಪ್ರಜಾವಾಣಿ@75 ಅಂಗವಾಗಿ ಪತ್ರಿಕಾ ವಿತರಕರಿಗೆ ಆರೋಗ್ಯ ತಪಾಸಣೆ ಏರ್ಪಡಿಸಿರುವುದು ಶ್ಲಾಘನೀಯ. ಯಾವುದೇ ಗಿಫ್ಟ್‌ ಕೊಡುವುದಕ್ಕಿಂತಲೂ ಇದು ಉತ್ತಮ ಪ್ರಯತ್ನ. ವಿತರಕ ಸಮುದಾಯದ ಆರೋಗ್ಯ ರಕ್ಷಣೆಯತ್ತ ಪತ್ರಿಕೆ ಗಮನ ಹರಿಸಿದ್ದು ಸಂತೋಷ ತಂದಿದೆ
ರಾಜಶೇಖರ ಜೆ.ಎಸ್‌
ನಾವೇ ವೈಯಕ್ತಿಕವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರೆ ಸಾವಿರಾರು ರೂಪಾಯಿ ಬೇಕು. ಈಗ ಜಯದೇವ ಆಸ್ಪತ್ರೆಯಲ್ಲಿ ಉಚಿತವಾಗಿ ಶಿಬಿರ ಏರ್ಪಡಿಸರುವುದರಿಂದ ಖುಷಿಯಾಗಿದೆ. ಹೀಗಾಗಿ ಕೆಲಸ ಮುಗಿಸಿದ ಕೂಡಲೇ ಆಸ್ಪತ್ರೆಗೆ ಬಂದೆ. ಸಮಾಧಾನವಾಯಿತು.
ರೇವಣ್ಣ
ಪತ್ರಿಕಾ ವಿತರಕರ ಕ್ಷೇಮ ಕುಶಲದ ಬಗ್ಗೆ ಕಾಳಜಿ ವಹಿಸುವ ಇಂಥ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇದೇ ಮೊದಲ ಬಾರಿಗೆ ನಮಗಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿರುವುದು ಸಂತೋಷ ಮೂಡಿಸಿದೆ. ನಮ್ಮ ಆರೋಗ್ಯ ಚೆನ್ನಾಗಿದ್ದರೆ ಪತ್ರಿಕಾ ಸೇವೆಯೂ ನಿರಂತರವಾಗಿರುತ್ತದೆ
ಲಿಂಗರಾಜು
ನನ್ನ ತಂದೆ ಬಿಕೆಎಂ ನಂಜಪ್ಪ ಅವರೂ ವಿತರಕರಾಗಿದ್ದರು. ಈಗ ನಾನು ವಿತರಕನಾಗಿರುವೆ. ಜಯದೇವ ಆಸ್ಪತ್ರೆಯನ್ನು ನೋಡೇ ಇರಲಿಲ್ಲ. ಆರೋಗ್ಯ ತಪಾಸಣೆ ಏರ್ಪಡಿಸಿದ್ದರಿಂದ ಇಲ್ಲಿಗೆ ಬಂದೆ. ಹೃದಯದ ಆರೋಗ್ಯದ ಕುರಿತು ತಿಳಿವಳಿಕೆಯೂ ಮೂಡಿತು. ‘ಪ್ರಜಾವಾಣಿ‘ಗೆ ಧನ್ಯವಾದಗಳು
ನಾನೇಶ್ವರ

‘ಪತ್ರಿಕಾ ವಿತರಕರ ಆರೋಗ್ಯವೂ ಮುಖ್ಯ’

‘ದಿನವೂ ನಿದ್ದೆಗೆಟ್ಟು ಬೆಳಗಿನ ಜಾವವೇ ಎದ್ದು ಚಳಿ ಗಾಳಿ ಮಳೆ ಎನ್ನದೆ ಪತ್ರಿಕೆಗಳನ್ನು ವಿತರಿಸುವವರ ಆರೋಗ್ಯ ಬಹಳ ಮುಖ್ಯ. ನಿಯಮಿತವಾಗಿ ಹೃದಯ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಜಾಗ್ರತೆ ವಹಿಸಬೇಕು. ಸಮಸ್ಯೆ ತೀವ್ರಗೊಳ್ಳುವ ಮುನ್ನವೇ ತಪಾಸಣೆಗೆ ಒಳಗಾದರೆ ಅಪಾಯವನ್ನು ತಡೆಗಟ್ಟಬಹುದು’ ಎಂದು ಡಾ.ಕೆ.ಎಸ್‌.ಸದಾನಂದ ಹೇಳಿದರು. ‘ಆರೋಗ್ಯದಲ್ಲಿ ತೊಂದರೆಯಾದರೆ ಮಾತ್ರ ಆಸ್ಪತ್ರೆಗೆ ಬರುವ ಪರಿಪಾಠವೇ ಬಹಳ ಜನರಲ್ಲಿದೆ. ಅದರ ಬದಲಿಗೆ ವರ್ಷಕ್ಕೊಮ್ಮೆ ಹೃದಯವೂ ಸೇರಿದಂತೆ ದೇಹದ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು’ ಎಂದರು. ‘ಇತ್ತೀಚಿನ ದಿನಗಳಲ್ಲಿ ಯುವಜನರಲ್ಲೇ ‌ಹೃದಯ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಆರೋಗ್ಯವಂತರಾಗಿರುವವರಲ್ಲೂ ಹೃದಯ ರೋಗಗಳಿರಲು ಸಾಧ್ಯ. ದಿಢೀರ್‌ ಹೃದಯಾಘಾತವೂ ಸಾಮಾನ್ಯವೆಂಬಂತೆ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.