ADVERTISEMENT

ರಾಜ್‌ಕುಮಾರ್‌, ಪುನೀತ್‌ ಕನ್ನಡ ಅಸ್ಮಿತೆಯ ಪ್ರತೀಕ: ಪ್ರೊ.ಮುಜಾಫರ್‌ ಅಸ್ಸಾದಿ

ಮೈಸೂರು ವಿಶ್ವವಿದ್ಯಾಲಯ ಹಂಗಾಮಿ ಕುಲಪತಿ ಪ್ರೊ.ಮುಜಾಫರ್‌ ಅಸ್ಸಾದಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 11:13 IST
Last Updated 17 ಮಾರ್ಚ್ 2023, 11:13 IST
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಪುನೀತ್‌ ರಾಜ್‌ಕುಮಾರ್ ಜನ್ಮದಿನ ಪ್ರಯುಕ್ತ ಶುಕ್ರವಾರ ‘ಅಪ್ಪು ಆಲದ ಮರ’ ದೃಶ್ಯಕಾವ್ಯವನ್ನು ಲಕ್ಷ್ಮಿ ಗೋವಿಂದರಾಜ್ ಲೋಕಾರ್ಪಣೆ ಮಾಡಿದರು. ಡಾ.ಎನ್‌.ಕೆ.ಲೋಲಾಕ್ಷಿ, ರೇವತ್, ವಿಜಯಲಕ್ಷ್ಮಿ ಕರಿಕಲ್, ಹಂಗಾಮಿ ಕುಲಪತಿ ಪ್ರೊ.ಮುಜಾಫರ್ ಅಸ್ಸಾದಿ ಇದ್ದಾರೆ 
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಪುನೀತ್‌ ರಾಜ್‌ಕುಮಾರ್ ಜನ್ಮದಿನ ಪ್ರಯುಕ್ತ ಶುಕ್ರವಾರ ‘ಅಪ್ಪು ಆಲದ ಮರ’ ದೃಶ್ಯಕಾವ್ಯವನ್ನು ಲಕ್ಷ್ಮಿ ಗೋವಿಂದರಾಜ್ ಲೋಕಾರ್ಪಣೆ ಮಾಡಿದರು. ಡಾ.ಎನ್‌.ಕೆ.ಲೋಲಾಕ್ಷಿ, ರೇವತ್, ವಿಜಯಲಕ್ಷ್ಮಿ ಕರಿಕಲ್, ಹಂಗಾಮಿ ಕುಲಪತಿ ಪ್ರೊ.ಮುಜಾಫರ್ ಅಸ್ಸಾದಿ ಇದ್ದಾರೆ    

ಮೈಸೂರು: ‘ಕನ್ನಡ ಸಂಸ್ಕೃತಿಯ ಹಿರಿಮೆಯು ರಾಜಕುಮಾರ್ ಮೂಲಕ ಅಭಿವ್ಯಕ್ತಗೊಂಡಿದೆ. ಅವರು ಕನ್ನಡ ಅಸ್ಮಿತೆಯ ಪ್ರತೀಕ. ಅವರ ಮುಂದುವರಿಕೆ ಪುನೀತ್‌ ರಾಜ್‌ಕುಮಾರ್‌ ಅವರಾಗಿದ್ದರು’ ಎಂದು ಮೈಸೂರು ವಿಶ್ವವಿದ್ಯಾಲಯ ಹಂಗಾಮಿ ಕುಲಪತಿ ಪ್ರೊ.ಮುಜಾಫರ್‌ ಅಸ್ಸಾದಿ ಸ್ಮರಿಸಿದರು.

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ‘ಅಸ್ತಿತ್ವ ಬಳಗ’ದ ಸಹಯೋಗದಲ್ಲಿ ‘ಪುನೀತ್‌ ರಾಜ್‌ಕುಮಾರ್’ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ‘ಅಪ್ಪು ಆಲದ ಮರ’ ದೃಶ್ಯಕಾವ್ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಪ್ಪು ಅವರ ನಗುವಿನಲ್ಲಿ ಸೌಂದರ್ಯವಿದೆ. ದಾನ–ಧರ್ಮ, ಸೇವೆಗಳು ಅವರ ನಗೆಯಲ್ಲಿ ಪ್ರತಿಫಲಿಸುತ್ತದೆ. ಅಂತಹ ನಗು ಬೇರೆಲ್ಲೂ ಕಾಣದು. ಶಾಶ್ವತವಾದ ನಾಯಕರಾಗಿ ಜನರ ಎದೆಯಲ್ಲಿ ಉಳಿದಿದ್ದಾರೆ’ ಎಂದು ಬಣ್ಣಿಸಿದರು.

ADVERTISEMENT

‘ರಾಜಕುಮಾರ್‌ ಹಾಗೂ ಪುನೀತ್ ಇಬ್ಬರೂ ಕನ್ನಡಿಗರ ಆಳಕ್ಕಿಳಿದ್ದಾರೆ. ಸಿನಿಮಾಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ಮಾಡಿದವರು. ಅಪ್ಪು ಸಾವು ಸಾಮಾನ್ಯದ್ದಲ್ಲ. ಅದು ಸುಂದರ ಪಯಣದ ಸಾವು. ಸೌಂದರ್ಯದ ಸಾವು. ಕನ್ನಡಿಗರ ಪ್ರತಿನಿಧಿತ್ವ ಹಾಗೂ ಸಂಕೇತವೊಂದರ ನಷ್ಟ’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದಿಂದ ಬಂದು ಸಾಧಿಸಿ ತೋರಿದ ಇಬ್ಬರು ಅದ್ಭುತ ವ್ಯಕ್ತಿತ್ವರಾಜ್‌ಕುಮಾರ್‌ ಹಾಗೂ ಎಚ್‌.ಡಿ.ದೇವೇಗೌಡ. ಇಬ್ಬರಲ್ಲೂ ದೇಸಿ ಪರಂಪರೆಯಿತ್ತು. ಹೀಗಾಗಿಯೇ ರಾಜ್‌ಕುಮಾರ್‌ ಸಿನಿಮಾಗಳಲ್ಲಿ ಗಟ್ಟಿತನವಿದೆ. ಅವು ಸದಾ ಚಿಂತನೆಗೆ ಒಡ್ಡುತ್ತವೆ. ಗಂಧದಗುಡಿಯ ಕುಮಾರ್, ಮಂತ್ರಾಲಯ ಮಹಾತ್ಮೆಯ ರಾಘವೇಂದ್ರ ಸ್ವಾಮಿ ಪಾತ್ರಗಳು ಈಗಲೂ ಕಾಡುತ್ತವೆ. ರಾಜ್‌ರ ಸಿನಿಮಾಗಳು ಸಾರ್ವಕಾಲಿಕ’ ಎಂದರು.

‘ದಕ್ಷಿಣ ಕನ್ನಡ ಮತ್ತು ಕೊಡಗು ಸೇರಿದಂತೆ ಉಪಭಾಷೆ ಆಡುವ ಪ್ರದೇಶದಲ್ಲಿ ರಾಜ್‌ಕುಮಾರ್ ಕನ್ನಡವನ್ನು ತಮ್ಮ ಚಿತ್ರಗಳ ಮೂಲಕ ತಲುಪಿಸಿದರು. ಗೋಕಾಕ ಚಳವಳಿ ಮೂಲಕ ಭಾಷೆ ಜೀವನದ ಭಾಗ, ಅದನ್ನು ಉಳಿಸಿದರಷ್ಟೇ ನಾವು ಎಂಬುದನ್ನು ರಾಜ್‌ ಹೇಳಿದರು. ರಾಜ್‌– ಪುನೀತ್‌ ಅವರ ಕೊಡುಗೆಯನ್ನು ಕನ್ನಡಿಗರು ನಿತ್ಯ ಸ್ಮರಿಸಬೇಕು’ ಎಂದರು.

ಡಾ.ಎನ್‌.ಕೆ.ಲೋಲಾಕ್ಷಿ– ಸಾಹಿತ್ಯ, ನಾಗೇಶ್‌ ಕಂದೇಗಾಲ– ಸಂಗೀತ, ಗಾಯಕ ಚಿಂತನ್‌ ವಿಕಾಸ್‌ ಹಾಡಿರುವ ‘ಆಲದ‌ಮರವೇ ದೊಡ್ಡಾಲದ ಮರವೇ..’ ದೃಶ್ಯಕಾವ್ಯವನ್ನು ಪುನೀತ್ ರಾಜ್‌ಕುಮಾರ್ ಸಹೋದರಿ ಲಕ್ಷ್ಮಿ ಗೋವಿಂದರಾಜು ಬಿಡುಗಡೆ ಮಾಡಿದರು. ಹಾಡು ನೋಡುತ್ತಲೇ ಕಣ್ಣೀರಾದರು.

ಸಂಸ್ಥೆಯ ನಿರ್ದೇಶಕಿ ಪ್ರೊ.ವಿಜಯಕುಮಾರಿ ಎಸ್‌. ಕರಿಕಲ್, ಗೀತೆಯ ಸಂಕಲನಕಾರ ರೇವತ್, ವಕೀಲ ಅಪ್ಪುಗಿರಿ ಇದ್ದರು.

ಲಯನ್ಸ್‌ ಸಂಸ್ಥೆ ಏರ್ಪಡಿಸಿದ್ದ ‘ರಕ್ತದಾನ ಶಿಬಿರ’ದಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

‘ಸೇವೆಯ ನಿದರ್ಶನ ಅಪ್ಪು’: ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಕೃತಿ ಚಿಂತಕ ಶಂಕರ ದೇವನೂರು ಮಾತನಾಡಿ, ‘ಯಾವ ಸೇವೆಯೂ ಕೇವಲ ಪ್ರದರ್ಶನ ಆಗಬಾರದು ಅಪ್ಪುವಿನಂತೆ ನಿದರ್ಶನ ಆಗಬೇಕು. ಆಸೆ, ಜಾತಿ, ವೈಭವಕ್ಕಾಗಿ ಬದುಕದೇ ಆಸೆಯನ್ನೇ ದಾಸರನ್ನಾಗಿ ಮಾಡಿಕೊಂಡು, ನಿರಹಂಕಾರದಿಂದ ಬದುಕುವುದನು ತೋರಿದವರು ಪುನೀತ್ ಹಾಗೂ ಅವರ ತಂದೆ ಡಾ.ರಾಜ್‌’ ಎಂದರು.

‘ಜೀವನವು ಸೃಷ್ಟಿಯ ಉತ್ಸವವಾಗಿದ್ದು ಅದನ್ನು ಶೃತಿಗೊಳಿಸಲು, ನಾದಮಯಗೊಳಿಸಲು ಬಂದಿದ್ದೇವೆ ಎಂದು ರಾಜ್‌–ಪುನೀತ್‌ ಬಂದಿದ್ದರು. ಅವರು ಕೊರಳ ಧ್ವನಿಗಿಂತ ಜನರ ಕರುಳ ಧ್ವನಿಯಾದರು. ಸ್ವರಗಳ ಜೊತೆಗೆ ಅಭಿನಯ ಕೂರಿಸಿದ ಅಧ್ಯಾತ್ಮ ವ್ಯಕ್ತಿತ್ವ ಇಬ್ಬರದಾಗಿತ್ತು’ ಎಂದು ತಿಳಿಸಿದರು.

‘ಬಸವಣ್ಣ, ಕುವೆಂಪು, ರಾಜಕುಮಾರ್‌ ಕನ್ನಡ ಸಂಸ್ಕೃತಿಯನ್ನು ಜಗತ್ತಿಗೆ ತೋರಿದವರು. ಒಂದಾಗಿ ಬದುಕುವುದೇ ಜೀವನವೆಂದು ಪಾಠ ಮಾಡಿದರು. ವಿಶ್ವಮಾನವ ಸಂದೇಶವನ್ನು ಸಾರಿದರು. ಜನರ ಅಂತರಂಗ ಪ್ರವೇಶ ಮಾಡಿ, ಒಂದಾಗಿ ಬೆರೆಯುವ, ಕಷ್ಟಗಳ ಅರಿಯುವ, ಅಂತಃಕರಣ ತೋರುವ ಪಾಠಗಳನ್ನು ಎದೆಯಲ್ಲಿ ಉಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.