ADVERTISEMENT

ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆ: ಡಾ.ಬಗಾದಿ ಗೌತಮ್

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 15:23 IST
Last Updated 12 ಆಗಸ್ಟ್ 2022, 15:23 IST
ಮೈಸೂರಿನಲ್ಲಿ ಶುಕ್ರವಾರ ನಡೆದ ದೇವರಾಜ ಅರಸು ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿದರು
ಮೈಸೂರಿನಲ್ಲಿ ಶುಕ್ರವಾರ ನಡೆದ ದೇವರಾಜ ಅರಸು ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿದರು   

ಮೈಸೂರು: ‘ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿಯನ್ನು ಆ.20ರಿಂದ 22ರವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಳೆದ 2 ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ನಡೆಸಲಾಗುವುದು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಚ್‌.ಎಸ್.ಬಿಂದ್ಯಾ, ‘ಆ.20ರಂದು ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಗುವುದು. ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಡಗಿ, ನೇಕಾರ, ಕಮ್ಮಾರ, ಕುಂಬಾರ, ವಿಶ್ವಕರ್ಮ ಮೊದಲಾದ ಕುಲಕಸುಬುದಾರರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘21ರಂದು ಜಿಲ್ಲಾ ಮಟ್ಟದಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಲಾಗುವುದು. ವಿದ್ಯಾರ್ಥಿನಿಲಯಗಳ ಮಕ್ಕಳಿಗೆ ಯೋಗ ಹಾಗೂ ವಿವಿಧ ಕ್ರೀಡಾ ಸ್ಪರ್ಧೆ ಇರುತ್ತದೆ. 22ರಂದು ಶಾಲಾ ಮಕ್ಕಳಿಗೆ ಅರಣ್ಯದ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಸಸಿ ನೆಡುವ ಕಾರ್ಯಕ್ರಮ ಹಾಗೂ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಉಪ ವಿಭಾಗಾಧಿಕಾರಿಗಳಾದ ಕಮಲಾಬಾಯಿ, ಮುಖಂಡರಾದ ಕೆ.ಎಸ್.ಶಿವರಾಂ, ಡಾ.ಎಂ.ಜಿ.ಆರ್.ಅರಸು ಮತ್ತು ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.