ADVERTISEMENT

ಮೈಸೂರು | ರಾಷ್ಟ್ರಪತಿ ಭೇಟಿ ನಾಳೆ: ಪೊಲೀಸರ ಪೂರ್ವಾಭ್ಯಾಸ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 4:21 IST
Last Updated 31 ಆಗಸ್ಟ್ 2025, 4:21 IST
ರಾಷ್ಟ್ರಪತಿ ಅವರು ನಗರದಲ್ಲಿ ಎರಡು ದಿನಗಳ ಕಾಲ ಸಂಚರಿಸಲಿರುವ ಮಾರ್ಗದಲ್ಲಿ ನಗರ ಪೊಲೀಸರು ಶನಿವಾರ ಸಂಜೆ ಪೂರ್ವಾಭ್ಯಾಸ ನಡೆಸಿದರು– ಪ್ರಜಾವಾಣಿ ಚಿತ್ರ
ರಾಷ್ಟ್ರಪತಿ ಅವರು ನಗರದಲ್ಲಿ ಎರಡು ದಿನಗಳ ಕಾಲ ಸಂಚರಿಸಲಿರುವ ಮಾರ್ಗದಲ್ಲಿ ನಗರ ಪೊಲೀಸರು ಶನಿವಾರ ಸಂಜೆ ಪೂರ್ವಾಭ್ಯಾಸ ನಡೆಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ರಾಷ್ಟ್ರಪತಿ ಅವರು ನಗರದಲ್ಲಿ ಎರಡು ದಿನಗಳ ಕಾಲ ಸಂಚರಿಸಲಿರುವ ಮಾರ್ಗದಲ್ಲಿ ನಗರ ಪೊಲೀಸರು ಶನಿವಾರ ಸಂಜೆ ಪೂರ್ವಾಭ್ಯಾಸ ನಡೆಸಿದರು.

ರಾಷ್ಟ್ರಪತಿ ಭೇಟಿಯ ಸಮಯದಲ್ಲಿ ಯಾವುದೇ ತೊಂದರೆಗಳು ಆಗಬಾರದು ಎಂದು ಜಿಲ್ಲಾಧಿಕಾರಿ ಸಭೆ ನಡೆಸಿ ಪ್ರಮುಖ ಅಧಿಕಾರಿಗಳಿಗೆ ಸೂಚಿಸಿದ್ದರು. ಇದಾದ ಬಳಿಕ ಪೊಲೀಸ್‌ ಇಲಾಖೆ ಹಲವು ಹಂತಗಳಲ್ಲಿ ಸಭೆ ನಡೆಸಿ, ರಾಷ್ಟ್ರಪತಿ ಓಡಾಡುವ ರಸ್ತೆಗಳಲ್ಲಿ ಹಾಗೂ ಭಾಗವಹಿಸುವ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಯೋಜನೆ ರೂಪಿಸಿದ್ದಾರೆ.

ಶನಿವಾರ ಬೆಳಿಗ್ಗೆ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಅವರು ಸಶಸ್ತ್ರ ದಳ ಮೈದಾನದಲ್ಲಿ, ಭಾನುವಾರ ನಡೆಯುವ ಗಣೇಶೋತ್ಸವ ಮೆರವಣಿಗೆ ಹಾಗೂ ರಾಷ್ಟ್ರಪತಿ ಕಾರ್ಯಕ್ರಮಗಳ ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗೆ ಜವಾಬ್ದಾರಿಗಳನ್ನು ಹಂಚಿದರು.

ADVERTISEMENT

‘ಯಾವುದೇ ಭದ್ರತಾ ಲೋಪ ನಡೆಯದಂತೆ ಕರ್ತವ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು. ಡಿಸಿಪಿಗಳಾದ ಆರ್‌.ಎನ್‌.ಬಿಂದುಮಣಿ, ಕೆ.ಎಸ್‌.ಸುಂದರ್‌ರಾಜ್‌, ಸಿದ್ದನಗೌಡ ವೈ ಪಾಟೀಲ, ಎ.ಮಾರುತಿ ಇದ್ದರು.

ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಕೆ.ಎಸ್‌.ಸುಂದರ್‌ ರಾಜ್‌ ಎಲ್ಲಾ ಸಂಚಾರ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ನಡೆಸಿ ಜವಾಬ್ದಾರಿ ಹಂಚಿದರು. ಆ ಬಳಿಕ ಪೊಲೀಸ್‌ ಬೆಂಗಾವಲು ವಾಹನಗಳ ಸಹಿತ ರಾಷ್ಟ್ರಪತಿ ಸಂಚರಿಸುವ ಸ್ಥಳಗಳಲ್ಲಿ ಪೂರ್ವಾಭ್ಯಾಸ ನಡೆಸಲಾಯಿತು. ಮೈಸೂರು ವಿಮಾನ ನಿಲ್ದಾಣದಿಂದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌, ಆಯಿಷ್‌ ಸಂಸ್ಥೆ, ಅರಮನೆ, ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ರಾಷ್ಟ್ರಪತಿ ಸೆ.1 ಹಾಗೂ 2ರಂದು ಸಂಚರಿಸಲಿದ್ದಾರೆ.

ಗಣೇಶೋತ್ಸವ ಮೆರವಣಿಗೆ ಭದ್ರತೆ:

ಭಾನುವಾರ ಮಧ್ಯಾಹ್ನದ ಬಳಿಕ ಸಾಮೂಹಿಕ ಗಣಪತಿ ವಿಸರ್ಜನೆ ನಡೆಯಲಿದ್ದು, ಮೆರವಣಿಗೆ ನಡೆಯುವ ಸ್ಥಳಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲು ಕಮಿಷನರ್‌ ಸೂಚಿಸಿದ್ದಾರೆ. ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಸಭಾ ಕಾರ್ಯಕ್ರಮ ನಡೆಯಲಿದೆ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಭಂಧಿಸಿ ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ತಿಳಿಸಲಾಗಿದೆ.

ಮಾಹಿತಿ ಕೊರತೆ: ಸಾರ್ವಜನಿಕರಿಗೆ ತೊಂದರೆ

ಪೊಲೀಸರು ಪೂರ್ವಾಭ್ಯಾಸ ನಡೆಸುವ ಕುರಿತು ಮಾಹಿತಿ ಇಲ್ಲದ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಪೊಲೀಸ್‌ ಬೆಂಗಾವಲು ವಾಹನಗಳು ಓಡಾಡುವ ರಸ್ತೆಗಳಲ್ಲಿ ವಾಹನಗಳನ್ನು ತಡೆಯಲಾಗಿತ್ತು. ‘ಯಾವುದೇ ಸೂಚನೆಯೂ ಇಲ್ಲದೆ ಪೂರ್ವಾಭ್ಯಾಸ ನಡೆಸಿದ್ದರಿಂದ ಓಡಾಟಕ್ಕೆ ತೊಂದರೆಯಾಯಿತು. ವರ್ತುಲ ರಸ್ತೆಗೆ ತೆರಳುವ ಕಡೆ ಸಮಸ್ಯೆಯಾಗಿದೆ’ ಎಂದು ಸಾರ್ವಜನಿಕರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.