ADVERTISEMENT

ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ; ಬೆಳವಣಿಗೆ ಗಮನಿಸಿ ನಿರ್ಧಾರ: ಬಾನು ಮುಷ್ತಕ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 21:50 IST
Last Updated 5 ಜುಲೈ 2025, 21:50 IST
ಬಾನು ಮುಷ್ತಾಕ್
ಬಾನು ಮುಷ್ತಾಕ್   

ಮೈಸೂರು: ‘88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವ ಬಗ್ಗೆ ಮುಂದಿನ ಬೆಳವಣಿಗೆಗಳನ್ನು ಗಮನಿಸಿ ನಿರ್ಧರಿಸುತ್ತೇನೆ’ ಎಂದು ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಕ್‌ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರಿಗೆ ಗೋಷ್ಠಿಗೂ ಅವಕಾಶ ನೀಡದ ಅಧ್ಯಕ್ಷರು (ಮಹೇಶ್ ಜೋಶಿ), ಈ ಬಾರಿ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇದನ್ನು ಅವರಲ್ಲಾದ ಬದಲಾವಣೆಯೇ, ಒತ್ತಡವೇ, ಸಾಮಾಜಿಕ ಸ್ಥಿತ್ಯಂತರವೇ ಅಥವಾ ಅನಿವಾರ್ಯವೇ ಎಂಬುದನ್ನು ತಿಳಿದುಕೊಳ್ಳಬೇಕಿದೆ’ ಎಂದರು.

‘ಮಹೇಶ್‌ ಜೋಶಿ ಅವರ ಮೇಲಿನ ಆರೋಪಗಳು ಸರ್ವಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳದಿರಲು ಮುಖ್ಯ ಕಾರಣವಾಗಿದ್ದು, ಇಂತಹ ಅಧ್ಯಕ್ಷರಿರುವಾಗ ಈ ಸ್ಥಾನಮಾನ ಒಪ್ಪಿಕೊಳ್ಳಬೇಕೋ ಎಂಬ ಪ್ರಶ್ನೆ ಇದೆ. ಸಮ್ಮೇಳನದ ಲೆಕ್ಕಾಚಾರದಲ್ಲಿ ದೋಷವಾದಾಗ ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಬರುತ್ತದೆ. ತನಿಖೆ ನಡೆಸಿ, ತಪ್ಪಿದ್ದರೆ ಕ್ರಮ ಕೈಗೊಳ್ಳಬೇಕಿದೆ. ಅದರ ಹೊರಾತಾಗಿ ಪ್ರಜಾಸತಾತ್ಮಕವಾಗಿ ಸರ್ವಾಧ್ಯಕ್ಷರ ಆಯ್ಕೆ ಮಾಡಿದ್ದು, ಸಂಸ್ಥೆಯ ಆಹ್ವಾನಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಂದು ವರ್ಗ ನಿಮ್ಮನ್ನು ಅಭಿನಂದಿಸಲಿಲ್ಲವೇಕೆ ಎಂಬ ಪ್ರಶ್ನೆಗೆ, ‘ನನ್ನ ಕಥೆಗಳಲ್ಲಿ ಬರುವ ಪಾತ್ರಗಳು ಆಶಾವಾದವನ್ನೇ ಹಂಚಿವೆ; ನನ್ನ ವ್ಯಕ್ತಿತ್ವವೂ ಅದೇ ಆಗಿದೆ. ಅವರು ಮುಂದಿನ ದಿನಗಳಲ್ಲಾದರೂ ಅಭಿನಂದಿಸುತ್ತಾರೆಂಬ ನಂಬಿಕೆ ಇದೆ’ ಎಂದರು.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್‌ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಸಮಾಜದಲ್ಲಿ ಗಂಡಾಳಿಕೆ ವ್ಯವಸ್ಥೆ ಇನ್ನೂ ಹೋಗಿಲ್ಲ. ಆದರೆ, ಶಾಲಿನಿ ಪ್ರಜಾಸತಾತ್ಮಕ ಅಧಿಕಾರ ಹೊಂದಿದ್ದಾರೆ. ಇದನ್ನು ಅಪಮಾನವಾಗಿ ತೆಗೆದುಕೊಳ್ಳದೆ, ಸಾರ್ವಜನಿಕವಾಗಿ ಮಹಿಳಾ ನಿಂದನೆ ಮಾಡುವವರ ವಿರುದ್ಧ ಕಾಯ್ದೆ ತರಲಿ. ಅಶ್ಲೀಲ ಮಾತನಾಡುವವರಿಗೆ ಮಾನಸಿಕ ಚಿಕಿತ್ಸೆ ಆಗಬೇಕಿದೆ’ ಎಂದರು.

ದಸರಾ ಉದ್ಘಾಟನೆಗೆ ಆಹ್ವಾನಿಸುವ ಬಗ್ಗೆ ಚರ್ಚೆ ಆಗುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ‘ಕೂಸು ಹುಟ್ಟುವ ಮುನ್ನವೇ ಹೆಸರಿಡುವುದು ಬೇಡ. ಮುಖ್ಯಮಂತ್ರಿಯವರ ನಿರ್ಧಾರಕ್ಕೆ ಕಾಯೋಣ’ ಎಂದು ನಗೆ ಚೆಲ್ಲಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.