ಮೈಸೂರು: ‘ಆಸ್ತಿ ತೆರಿಗೆ ಪಾವತಿಸಲು ನೀಡಲಾಗಿರುವ ರಿಯಾಯಿತಿ ಅವಧಿಯನ್ನು ನಗರ ಪಾಲಿಕೆ ಅಧಿಕಾರಿಗಳು ವಿಸ್ತರಿಸಬೇಕು’ ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಕೋರಿದರು.
‘ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದರಿಂದ ಮತ್ತು ಸರ್ವರ್ ಸಮಸ್ಯೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಂಗ್ರಹವಾಗಿಲ್ಲ. ಇದರಿಂದ ಅನೇಕರು ಪಾಲಿಕೆ ನೀಡಿದ್ದ ರಿಯಾಯಿತಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಅವಧಿಯನ್ನು ಮತ್ತೆ ಒಂದೂವರೆ ತಿಂಗಳು ವಿಸ್ತರಿಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಒತ್ತಾಯಿಸಿದರು.
‘ಹಲವರು ರಿಯಾಯಿತಿ ಸೌಲಭ್ಯ ಪಡೆಯಲು ಪಾಲಿಕೆ ಕಚೇರಿಗಳ ಬಳಿ ಗಂಟೆಗಟ್ಟಲೆ ಕಾದು ನಿಂತಿದ್ದರು. ಆದರೆ, ಲೋಕಸಭೆ ಚುನಾವಣೆ ಕಾರಣ ಅಧಿಕಾರಿಗಳು ಅನ್ಯಕಾರ್ಯಕ್ಕೆ ನಿಯೋಜನೆಗೊಂಡಿದ್ದರಿಂದಾಗಿ ಹಾಗೂ ಸತತ 15 ದಿನ ಪಾಲಿಕೆ ವೆಬ್‌ಸೈಟ್ ಸರ್ವರ್ ಸಮಸ್ಯೆ ಎದುರಿಸಿದ್ದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದು ತಿಳಿಸಿದರು.
‘ಈ ನಿಟ್ಟಿನಲ್ಲಿ ಆಡಳಿತಾಧಿಕಾರಿ ಆಗಿರುವ ಪ್ರಾದೇಶಿಕ ಆಯುಕ್ತರು ಗಮನಹರಿಸಬೇಕು. ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳಕ್ಕೆ ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕೋರಿದರು.
ಮುಖಂಡರಾದ ವಾಸು, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.