ADVERTISEMENT

ಮೈಸೂರು | ಕೆಆರ್‌ಎಸ್‌ನಲ್ಲಿ ವಿಶ್ವದರ್ಜೆ ಉದ್ಯಾನ: ವಿರೋಧ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:41 IST
Last Updated 27 ಜುಲೈ 2024, 15:41 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಮೈಸೂರು: ‘ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಸುತ್ತಲೂ ವಿಶ್ವದರ್ಜೆಯ ಉದ್ಯಾನ ಅಭಿವೃದ್ಧಿಪಡಿಸುವುದಕ್ಕೆ ರೈತ ಸಂಘ ಪ್ರಬಲ ವಿರೋಧ ವ್ಯಕ್ತಪಡಿಸುತ್ತದೆ. ಈ ಹಿಂದೆ ಡಿಸ್ನಿಲ್ಯಾಂಡ್‌ ಮಾದರಿಯ ಯೋಜನೆಗೆ ಸರ್ಕಾರ ಮುಂದಾಗಿತ್ತು. ಆಗ, ರೈತ ಸಂಘ ಹಾಗೂ ಸಾರ್ವಜನಿಕರ ವಿರೋಧದ ಕಾರಣದಿಂದ ಕೈಬಿಡಲಾಗಿದ್ದ ಯೋಜನೆಯನ್ನು ಬೇರೆ ಹೆಸರಿನಲ್ಲಿ ಈಗ ಅನುಷ್ಠಾನಕ್ಕ ತರಲು ಹುನ್ನಾರ ನಡೆಯುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

‘ಜಲಾಶಯದ ಸುತ್ತ ಈಗಾಗಲೇ ಇರುವ ಭೂಮಿಯ ಜೊತೆಗೆ 198 ಎಕರೆ ಭೂಮಿಯನ್ನು ಉದ್ಯಾನಕ್ಕೆಂದು ಪಡೆಯಬೇಕಾಗುತ್ತದೆ ಎಂದು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಫಲವತ್ತಾದ ಕೃಷಿ ಭೂಮಿ ಬಳಸಿಕೊಳ್ಳಲು ಮುಂದಾದರೆ ನಾವು ಸಹಿಸುವುದಿಲ್ಲ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯೋಜನೆಯ ಸಂಬಂಧ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದು ಮುಂದುವರಿಯುವಂತೆ ಒತ್ತಾಯಿಸಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಕುಟುಂಬಕ್ಕೊಬ್ಬ ಸದಸ್ಯ–ಊರಿಗೊಬ್ಬ ಕಾರ್ಯಕರ್ತ’ ಎಂಬ ಗುರಿಯೊಂದಿಗೆ ರೈತ ಪರ ನೀತಿಗಾಗಿ ಚಳವಳಿಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶ ಹೊಂದಲಾಗಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಈಚೆಗೆ ನಡೆದ 45ನೇ ರೈತ ಹುತಾತ್ಮರ ದಿನಾಚರಣೆ ಹಾಗೂ ರಾಜ್ಯಮಟ್ಟದ ಪ್ರತಿನಿಧಿಗಳ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜನಾಂದೋಲನಗಳ ರಾಜಕೀಯ ಶಕ್ತಿ ವೃದ್ಧಿಗೆ ತೀರ್ಮಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಮುಖಂಡರಾದ ಮರಂಕಯ್ಯ ಹಾಗೂ ಮಂಡಕಳ್ಳಿ ಮಹೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.