ADVERTISEMENT

ಮೈಸೂರಿಗೆ ಆಗಮಿಸಿದ ಮೋದಿ, ನಾಳೆ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಸಫಾರಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 16:36 IST
Last Updated 8 ಏಪ್ರಿಲ್ 2023, 16:36 IST
   

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಇಲ್ಲಿಗೆ ಬಂದು ತಂಗಿದ್ದು, ಏ.9ರಂದು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ. ಮೈಸೂರಿನಲ್ಲಿ ಅರಣ್ಯ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹುಲಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ.

ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅವರು, ರಾತ್ರಿ 9.25ಕ್ಕೆ ವಿಮಾನನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಜಿಲ್ಲಾಡಳಿತದಿಂದ ಬರಮಾಡಿಕೊಳ್ಳಲಾಯಿತು. ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್‌ ಹಾಗೂ ಜನಪ್ರತಿನಿಧಿಗಳು ಇದ್ದರು. ವಿಧಾನಸಭೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಜನಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಮತ್ತು ನಾಯಕರಿಗೆ ಸ್ವಾಗತಿಸುವ ಅವಕಾಶ ದೊರೆಯಲಿಲ್ಲ.

ಇಲ್ಲಿನ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಅವರು, ಏ.9ರಂದು ಬೆಳಿಗ್ಗೆ 6.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಮೈಸೂರಿನಿಂದ ಬಂಡೀಪುರಕ್ಕೆ ತೆರಳುವ ಅವರು, ಬೆಳಿಗ್ಗೆ 7ಕ್ಕೆ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ.

ADVERTISEMENT

ಅಲ್ಲಿಂದ ರಸ್ತೆ ಮಾರ್ಗದ ಮೂಲಕ 7.15ಕ್ಕೆ ಬಂಡೀಪುರ ಕ್ಯಾಂಪಸ್‌ಗೆ ಬರಲಿದ್ದಾರೆ. 7.15ರಿಂದ ಎರಡು ತಾಸು ಬಂಡೀಪುರ ಅರಣ್ಯದಲ್ಲಿ ಸಫಾರಿ ಮಾಡಲಿದ್ದಾರೆ. 9.35ಕ್ಕೆ ರಸ್ತೆ ಮಾರ್ಗದ ಮೂಲಕ ನೆರೆಯ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಸಾಕ್ಷ್ಯಚಿತ್ರದಲ್ಲಿ ಭಾಗವಹಿಸಿರುವ ಬೊಮ್ಮ–ಬೆಳ್ಳಿ ದಂಪತಿಯನ್ನು ಭೇಟಿಯಾಗಲಿದ್ದಾರೆ. ನಂತರ ವಿವಿಧ 12 ಹುಲಿ ಸಂರಕ್ಷಿತ ಪ‍್ರದೇಶಗಳ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. 9.45ಕ್ಕೆ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಬಂಡೀಪುರದಲ್ಲಿ ಸಫಾರಿ ಬಿಟ್ಟು ಬೇರೆ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ 10ಕ್ಕೆ ಮೈಸೂರಿಗೆ ಬರುವ ಅವರು, ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಹುಲಿ ಸಂರಕ್ಷಣೆಗಾಗಿ ಅಮೃತ್ ಕಾಲ್ ಕಾ ವಿಷನ್’ ಪ್ರಕಟಣೆಗಳು, ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆಯ ಪರಿಣಾಮಕಾರಿ ಮೌಲ್ಯಮಾಪನದ 5ನೇ ಚರಣದ ಸಾರಾಂಶ ವರದಿ ಮತ್ತು ಹುಲಿ ಯೋಜನೆಯು 50 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥ ಹೊರತಂದಿರುವ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12.40ಕ್ಕೆ ವಿಮಾನನಿಲ್ದಾಣದಿಂದ ತೆರಳಲಿದ್ದಾರೆ.

ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೂ ಅವಕಾಶ ನೀಡಿಲ್ಲ.

ಪ್ರಧಾನಿ ವಾಸ್ತವ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.