ಮೈಸೂರು: ‘ಮೈಸೂರಿನ ಪರಂಪರೆ ಹಾಗೂ ಮಡಿಕೇರಿಯ ಪರಿಸರವನ್ನು ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡುವ ಯೋಜನೆ ರೂಪಿಸಲಿದ್ದೇನೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಪಾದಿಸಿದರು.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ, ‘ನಗರದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡುವೆ ನನ್ನ ಸ್ಪರ್ಧೆಗೆ ಪಕ್ಷ ಸೂಚಿಸಿತ್ತು. ಅಂದು ನನ್ನ ಮುಂದಿದ್ದ ಅನೇಕ ಸವಾಲುಗಳಿಗೆ ಕಾರ್ಯಕರ್ತರು ತಮ್ಮ ಕೆಲಸದ ಮೂಲಕ ಪರಿಹಾರ ನೀಡಿದ್ದಾರೆ’ ಎಂದರು.
‘ಅಭ್ಯರ್ಥಿಗೆ ರಾಜಕೀಯ ಅನುಭವ ಇಲ್ಲ. ಬಿಜೆಪಿ, ಜೆಡಿಎಸ್ ಹೊಂದಾಣಿಕೆಯಾಗುವುದಿಲ್ಲ ಎಂಬ ಮಾತಿನ ನಡುವೆಯೂ ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಿ ಗೆಲುವು ತಂದು ಕೊಟ್ಟಿದ್ದಾರೆ. ಅಪಪ್ರಚಾರಗಳನ್ನು ನಡೆಸದೆ, ಮೋದಿ, ಕುಮಾರಸ್ವಾಮಿ ಹಾಗೂ ಮಹಾರಾಜರ ಕೊಡುಗೆಗಳನ್ನು ಮುಂದಿಟ್ಟು ಚುನಾವಣೆ ಎದುರಿಸಿ ಮಾದರಿಯಾಗಿದ್ದೇವೆ’ ಎಂದು ಹೇಳಿದರು.
ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಮಾತನಾಡಿ, ‘ರಾಜಮನೆತನವು ರಾಜ್ಯಕ್ಕೆ ಕೊಟ್ಟ ಕೊಡುಗೆ ಮರೆಯಲು ಸಾಧ್ಯವಿಲ್ಲ. ಅವರು ಹೆಸರಿನ ಆಸೆಯಿಲ್ಲದೆ ಕೆಲಸ ಮಾಡಿದ್ದಾರೆ. ಮೋದಿ, ಕುಮಾರಸ್ವಾಮಿ ನೇತೃತ್ವದಲ್ಲಿ ರಾಜಮನೆತನದವರಿಗಾಗಿ ಕೆಲಸ ಮಾಡಿರುವುದು ಹೆಮ್ಮೆ ತಂದಿದೆ. ಅವರು ನೂತನ ಸಂಸದರಾದರೂ ನಮಗೆ ಮಹಾರಾಜರೇ’ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹ, ನಗರಾಧ್ಯಕ್ಷ ಚೆಲುವೇಗೌಡ, ಮಾಜಿ ಮೇಯರ್‌ಗಳಾದ ರವಿಕುಮಾರ್, ಲಿಂಗಪ್ಪ, ಭಾಗ್ಯವತಿ, ರಾಜ್ಯ ವಕ್ತಾರ ರವಿಚಂದ್ರ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.