ಮೈಸೂರು: ವೈದ್ಯರು ಮತ್ತು ಸಿಬ್ಬಂದಿ ಮೇಲಿನ ಹಲ್ಲೆಗಳನ್ನು ತಡೆಯಬೇಕು. ಅಗ್ನಿಶಾಮಕ ದಳದಿಂದ ತ್ವರಿತವಾಗಿ ಪರವಾನಗಿ–ಎನ್‌ಒಸಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಮಾಲೀಕರು ಹಾಗೂ ವೈದ್ಯರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಿಟ್ಟರು.
ನಗರದಲ್ಲಿ ಸೋಮವಾರ ಮೈಸೂರು ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‌ಗಳ ಸಂಘ (ಮಹಾನ್) ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ವಿವಿಧ ಬೇಡಿಕೆ ಹಾಗೂ ಸಲಹೆಗಳು ಕೇಳಿಬಂದವು. ಎಲ್ಲವನ್ನೂ ಆಲಿಸಿದ ಸಚಿವರು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
‘ಕೆಲ ಆಸ್ಪತ್ರೆಗಳಿಗೆ ಅಗ್ನಿಶಾಮಕ ದಳದವರು ಅಗ್ನಿ ಸುರಕ್ಷತೆಯ ಪ್ರಮಾಣಪತ್ರ ನೀಡುತ್ತಿಲ್ಲ. ಇದರಿಂದ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಆಸ್ಪತ್ರೆ ಕಟ್ಟಿದವರು ಕಷ್ಟ ಪಡುತ್ತಿದ್ದಾರೆ’ ಎಂದು ಕೆಲವು ವೈದ್ಯರು ದೂರಿತ್ತರು. ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.
‘ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಅದರ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಕೂಡ ಅಪರಾಧ. ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ಮಾತನಾಡಿ ಕ್ರಮಕ್ಕೆ ಸೂಚಿಸುತ್ತೇನೆ’ ಎಂದರು.
‘ಕೆಲವು ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ಸಮಸ್ಯೆ ಆಗುತ್ತಿದ್ದು, ಇದರ ಬಗ್ಗೆ ಎಚ್ಚರ ವಹಿಸಿ’ ಎಂದು ಸಲಹೆ ನೀಡಿದರು.
‘ಖಾಸಗಿ ಆಸ್ಪತ್ರೆಗಳು ಸರ್ಕಾರದ ವಿವಿಧ ಯೋಜನೆಗಳ ಅಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಆದರೆ ಅಂತಹ ಯೋಜನೆಗಳ ಬಿಲ್ ಪಾವತಿ ತಡವಾಗುತ್ತಿದೆ’ ಎಂದು ವೈದ್ಯರು ಗಮನ ಸೆಳೆದರು. ತಿಂಗಳ ಒಳಗೆ ಹಣ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
‘ಮೈಸೂರು ಭಾಗದ ವಿದ್ಯಾರ್ಥಿಗಳಿಗೆ ಎಚ್‌ಪಿವಿ ಲಸಿಕೆ ಹಾಕಲು ಸರ್ಕಾರ ಸಹಕಾರ ನೀಡಬೇಕು’ ಎಂದು ಕರ್ನಾಟಕ ಸ್ತ್ರೀರೋಗ ತಜ್ಞರ ಅಕಾಡೆಮಿ (ಕೆಸಿಒಜಿ ) ಕಾರ್ಯದರ್ಶಿ ಡಾ.ಸೋನಿಯಾ ಮಂದಪ್ಪ ಮನವಿ ಮಾಡಿದರು.
‘9ರಿಂದ 14ವರ್ಷದವರೆಗಿನ ಮಕ್ಕಳಿಗೆ ಒಮ್ಮೆ ಲಸಿಕೆ ನೀಡಲಾಗುವುದು. ಕಲ್ಯಾಣ ಕರ್ನಾಟಕಕ್ಕೆ ಉಚಿತವಾಗಿ ಈ ವ್ಯಾಕ್ಸಿನ್ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಮೈಸೂರು ಭಾಗದಲ್ಲಿ ನಾವು ಸಂಘ ಸಂಸ್ಥೆಗಳ ನೆರವಿನಿಂದ ಉಚಿತವಾಗಿ ಔಷಧಿ ಕೊಡುತ್ತಿದ್ದೇವೆ" ಮಾಹಿತಿ ನೀಡಿದರು. ಯೋಜನೆ ಬಗ್ಗೆ ಪ್ರಚಾರ ಕೈಗೊಳ್ಳುವಂತೆ ಕೋರಿದರು.
ಸಂಘದ ಅಧ್ಯಕ್ಷ ಡಾ. ಜಿ.ಆರ್. ಚಂದ್ರಶೇಖರ್ ಸಮಸ್ಯೆಗಳ ಮನವಿ ಪತ್ರವನ್ನು ಸಚಿವರಿಗೆ ನೀಡಿದರು. ಡಿಎಚ್‌ಒ ಡಾ. ಕುಮಾರಸ್ವಾಮಿ, ಮಹಾನ್ ನಿಕಟಪೂರ್ವ ಅಧ್ಯಕ್ಷ ಡಾ.ಜಾವೀದ್ ನಯೀಮ್, ಉಪಾಧ್ಯಕ್ಷ ಡಾ. ಬಿ.ಎನ್. ರಾಜೀವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.