ಎಚ್.ಡಿ.ಕೋಟೆ: ‘ಕೆರೆಯು ಗ್ರಾಮ ಮತ್ತು ಪ್ರಾಣಿ, ಪಕ್ಷಿಗಳಿಗೆ ಆಧಾರವಾಗಿದ್ದು, ಕೆರೆಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ’ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿ.ವಿಜಯ್ ಕುಮಾರ್ ನಾಗನಾಳ ತಿಳಿಸಿದರು.
ತಾಲ್ಲೂಕಿನ ಚಿಕ್ಕಕೆರೆಯೂರು ಗ್ರಾಮದಲ್ಲಿರುವ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತಾವರೆಕೆರೆ ಸಮಿತಿಯ ಸಹಕಾರದೊಂದಿಗೆ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಪುನಶ್ಚೇತನಗೊಂಡ ತಾವರೆಕೆರೆಗೆ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
‘ಕೆರೆಗೆ ಇತಿಹಾಸವಿದ್ದು, ರಕ್ಷಣೆ ಮಾಡಬೇಕು. ಹೂಳು ತೆಗೆಯಲು ಆರ್ಥಿಕ ಸಹಕಾರವನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುತ್ತದೆ’ ಎಂದು ಹೇಳಿದರು.
‘ಕೆರೆಯಿಂದ ತೆಗೆದ ಹೂಳು ರೈತರು ಜಮೀನಿಗೆ ಹಾಕಿಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಧಿಕ ಫಸಲು ಬರುತ್ತದೆ. ಕೆರೆಯ ಸುತ್ತಮುತ್ತಲ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಮತ್ತು ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತದೆ’ ಎಂದರು.
ತಾಲ್ಲೂಕಿನ ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ ಮಾತನಾಡಿದರು. ತಾಲ್ಲೂಕು ಯೋಜನಾಧಿಕಾರಿ ವಿ. ಭಾಸ್ಕರ್, ಎಂಜಿನಿಯರ್ ಪುಷ್ಪರಾಜು, ಕೃಷಿ ಮೇಲ್ವಿಚಾರಕ ರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶಂಕರ್, ತಾವರೆಕೆರೆ ಸಮಿತಿಯ ಅಧ್ಯಕ್ಷ ವಿಜೇಂದ್ರಗೌಡ, ಉಪಾಧ್ಯಕ್ಷ ಸಂಗರಾಜು, ಸದಸ್ಯರಾದ ರವಿ ಸಿ.ಎನ್. ನಾಗೇಗೌಡ, ಸಿದ್ದಪ್ಪಾಜಿ, ರಾಮ, ಕುಮಾರ್, ಸಿ.ಕೆ.ರವಿ., ನಾಗೇಂದ್ರ, ಮಂಜೇಗೌಡ, ಮಂಜು, ಯೋಗೇಶ್, ಚೇತನ್ ಕುಮಾರ್, ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.