ADVERTISEMENT

ನಾಲೆಗಳಿಗೆ ನೀರು ಹರಿಸಲು ರೈತರ ಆಗ್ರಹ

ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ‘ಕಾಡಾ’ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 5:49 IST
Last Updated 2 ಆಗಸ್ಟ್ 2019, 5:49 IST
ಮೈಸೂರು ಜಿಲ್ಲೆಯ ಎಲ್ಲಾ ನಾಲೆಗಳಿಗೂ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಗುರುವಾರ ‘ಕಾಡಾ’ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು
ಮೈಸೂರು ಜಿಲ್ಲೆಯ ಎಲ್ಲಾ ನಾಲೆಗಳಿಗೂ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಗುರುವಾರ ‘ಕಾಡಾ’ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು   

ಮೈಸೂರು: ಜಲಾಶಯಗಳಿಂದ ಜಿಲ್ಲೆಯ ಎಲ್ಲ ನಾಲೆಗಳಿಗೂ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ನೇತೃತ್ವದಲ್ಲಿ ರೈತರು ಇಲ್ಲಿನ ‘ಕಾಡಾ’ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೊಡಗು ಹಾಗೂ ಕೇರಳ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಜಲಾಶಯಗಳು ತುಂಬುತ್ತಿವೆ. ಆದರೆ, ಈ ನೀರನ್ನು ತಮಿಳುನಾಡಿಗೆ ಬಿಡುವ ಮೂಲಕ ರಾಜ್ಯದ ರೈತರಿಗೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಒಕ್ಕೊರಲಿನಿಂದ ಆರೋಪಿಸಿದರು.‌

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ‘ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಒಂದು ವೇಳೆ ಈಗ ನೀರು ಹರಿಸದಿದ್ದರೆ ಭತ್ತವು ಮುಂದೆ ರೋಗಬಾಧೆಗೆ ತುತ್ತಾಗುವ ಸಂಭವ ಇದೆ’ ಎಂದು ಹೇಳಿದರು.

ADVERTISEMENT

ಜಲಾಶಯ ಭರ್ತಿ ಆಗುವುದಕ್ಕೂ ಮುನ್ನವೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು, ಕಬಿನಿ ಜಲಾಶಯದ ಎಡ ಮತ್ತು ಬಲ ದಂಡ ನಾಲೆಗೆ ನೀರು ಬಿಡಬೇಕು, ಹುಲ್ಲಹಳ್ಳಿ–ರಾಂಪುರ ನಾಲೆಗೆ ನೀರು ಒದಗಿಸಬೇಕು, ತಾರಕ ಜಲಾಶಯಕ್ಕೆ ಕಬಿನಿ ಹಿನ್ನೀರಿನಿಂದ ನೀರು ತುಂಬಿಸಿ ಆ ಜಲಾಶಯದ ಅಚ್ಚುಕಟ್ಟಿಗೂ ನೀರು ಬಿಡಬೇಕು ಎಂದು ಅವರು ಒತ್ತಾಯಿಸಿದರು.

ಕೆರೆಗಳಿಗೆ ನೀರು ತುಂಬಿಸುವುದನ್ನು ಮರೆಯಬಾರದು. ನೀರು ತುಂಬಿಸಿದರೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ಹಾಗಾಗಿ, ಸರ್ಕಾರ ಕೂಡಲೇ ಜಲಾಶಯದ ವ್ಯಾಪ್ತಿಗೆ ಬರುವ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅಶ್ವಥನಾರಾಯಣರಾಜೇಅರಸ್, ಎಚ್.ಸಿ.ಲೋಕೇಶ್‌ರಾಜೇ ಅರಸ್, ರಾಮಕೃಷ್ಣಪ್ಪ, ಶಂಕರ್, ಹೊಸೂರು ಕುಮಾರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.