ADVERTISEMENT

ವಾಲ್ಮೀಕಿ ಪ್ರತಿಮೆಗೆ ಸಗಣಿ: ಕಿಡಿಗೇಡಿಗಳ ಬಂಧಿಸಿ

ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದ ವಾಲ್ಮೀಕಿ ನಾಯಕ ಸಮಾಜದವರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 13:37 IST
Last Updated 15 ಸೆಪ್ಟೆಂಬರ್ 2019, 13:37 IST
ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದಲ್ಲಿ ಪ್ರತಿಭಟನಾನಿರತರೊಂದಿಗೆ ಪೊಲೀಸರು ಚರ್ಚಿಸಿದರು
ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದಲ್ಲಿ ಪ್ರತಿಭಟನಾನಿರತರೊಂದಿಗೆ ಪೊಲೀಸರು ಚರ್ಚಿಸಿದರು   

ಸರಗೂರು: ತಾಲ್ಲೂಕಿನ ಸಾಗರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಎರಡನೇ ಬಾರಿಗೆ ವಾಲ್ಮೀಕಿ ಪ್ರತಿಮೆಗೆ ಸಗಣಿ ಎರಚಿದ್ದಾರೆ. ನಾಲ್ಕು ದಿನಗಳ ಹಿಂದೆ ಪ್ರತಿಮೆಗೆ ಸಗಣಿ ಎರಚಿದ್ದು, ಗ್ರಾಮಸ್ಥರು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ್ದರು. ಆದರೆ, ಕಿಡಿಗೇಡಿಗಳು ಮತ್ತೆ ಸಗಣಿ ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಾಲ್ಮೀಕಿ ನಾಯಕ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಗ್ರಾಮದಲ್ಲಿ ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರವನ್ನು ಹಾಕಿದ್ದರು. ಆದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರಗೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಆಗಾಗ್ಗೆ ಇಂತಹ ಘಟನೆಗಳು ಮರುಕಳುಹಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ 14 ಜಾತಿಗಳ ಜನರಿದ್ದು, ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಕೃತ್ಯದಿಂದ ಗ್ರಾಮದಲ್ಲಿ ಅಶಾಂತಿ ಮೂಡಿದೆ. ಎಲ್ಲ ಸಮುದಾಯದವರ ಸಭೆ ನಡೆಸಬೇಕು. ಕಿಡಿಗೇಡಿಗಳನ್ನು ಬಂಧಿಸ ಬೇಕು ಎಂದು ಜಿ.ಪಂ ಮಾಜಿ ಸದಸ್ಯ ಚಿಕ್ಕವೀರನಾಯಕ, ತಾಲ್ಲೂಕು ನಾಯಕ ಸಮಾಜದ ಮುಖಂಡ ಎಂ.ಸಿ.ದೊಡ್ಡ ನಾಯಕ, ಸರಗೂರು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಶಂಭುಲಿಂಗನಾಯಕ ಆಗ್ರಹಿಸಿದ್ದಾರೆ.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹುಣಸೂರು ಡಿವೈಎಸ್ಪಿ ಚಲುವರಾಜ್, ‘ಸಗಣಿ ಎರಚಿರುವ ಕಿಡಿಗೇಡಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನೆ ಯನ್ನು ಕೈಬಿಟ್ಟು ಶಾಂತಿಯನ್ನು ಕಾಪಾಡ ಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು.

ಸಾಗರೆ ನಾಯಕ ಸಮಾಜದ ಅಧ್ಯಕ್ಷ ತಗಡೂರ ನಾಯಕ, ಪೋಟಿನಾಯಕ, ಜಯಪ್ಪ, ತಿಮ್ಮನಾಯಕ, ಪುಟ್ಟ ನಾಯಕ, ಆಗತ್ತೂರು ಮಹದೇವ ನಾಯಕ, ಆಗತ್ತೂರು ಅಂಕನಾಯಕ, ಸಾಗರೆ ಶಂಕರ್, ಮಹೇಂದ್ರ, ದಂಡನಾಯಕ, ಸರಗೂರು ನಾಗೇಂದ್ರ, ಗುರುಸ್ವಾಮಿನಾಯಕ ಭಾಗವಹಿಸಿದ್ದರು.

ಸಿಪಿಐ ಪುಟ್ಟಸ್ವಾಮಿ, ಸರಗೂರು ಮತ್ತು ಬೀಚನಹಳ್ಳಿ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.