ADVERTISEMENT

ಸರ್ಕಾರದ ವಿರುದ್ಧ ರೈತರ ಅರೆ ಬೆತ್ತಲೆ ಪ್ರತಿಭಟನೆ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 2:49 IST
Last Updated 9 ಆಗಸ್ಟ್ 2020, 2:49 IST
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೈಸೂರಿನ ಜಿಲ್ಲಾ ನ್ಯಾಯಾಲಯದ ಮುಂಭಾಗ ಶನಿವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೈಸೂರಿನ ಜಿಲ್ಲಾ ನ್ಯಾಯಾಲಯದ ಮುಂಭಾಗ ಶನಿವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು   

ಮೈಸೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಲ್ಲಿನ ಜಿಲ್ಲಾ ನ್ಯಾಯಾಲಯದ ಮುಂಭಾಗ ಶನಿವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮೈಸೂರು–ಚಾಮರಾಜನಗರ ಜಿಲ್ಲಾ ಸುಸ್ಥಿರ ಸಾವಯವ ಕೃಷಿಕರ ಒಕ್ಕೂಟದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

‘ಕೃಷಿ ಭೂಮಿ ನಮ್ಮದು ಮಾರಾಟಕ್ಕಿಲ್ಲ, ಪ್ರಾಣ ಕೊಟ್ಟೇವು ಕೃಷಿ ಭೂಮಿ ಕೊಡೆವು, ರೈತ ದ್ರೋಹಿ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಮೊಳಗಿಸಿದರು.

ADVERTISEMENT

‘ಆಗಸ್ಟ್ 8ರಂದು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾದ ದಿನ. ಈ ದಿನದಂದೇ ಕಾರ್ಪೊರೇಟ್ ಕಂಪನಿಗಳು ಕೃಷಿ ಬಿಟ್ಟು ತೊಲಗಲಿ ಎಂಬ ಚಳವಳಿ ಆರಂಭಿಸಲಾಗಿದೆ’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ರಾಜ್ಯ ಸರ್ಕಾರವು ಜನವಿರೋಧಿ ಶಾಸನಗಳನ್ನು ಯಾವುದೇ ಚರ್ಚೆ ಇಲ್ಲದೇ ಜಾರಿಗೆ ತರುತ್ತಿದೆ. ಶಾಸನ ಸಭೆ ನಡೆಸದೇ ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತಿದೆ. ಇದು ಪಾಳೇಗಾರಿಕೆಯ ಸರ್ಕಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಸರ್ಕಾರವು ಭೂಗಳ್ಳರು, ಕಾರ್ಪೋರೇಟ್ ಕಂಪನಿಗಳು ಹಾಗೂ ಗೃಹನಿರ್ಮಾಣ ಸಹಕಾರ ಸಂಘಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಕಿಡಿಕಾರಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ವಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಸಾಮೂಹಿಕ ನಾಯಕತ್ವದ ರೈತ ಸಂಘದ ರಘು, ಮಂಜು ಕಿರಣ್, ಮುಖಂಡರಾದ ಸಿದ್ದೇಶ್, ಕೃಷ್ಣೇಗೌಡ, ರಾಮೇಗೌಡ, ನಾಗರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.