ADVERTISEMENT

ಅತ್ಯಾಚಾರಿಗಳಿಗೆ ಕರುಣೆ ತೋರದಿರಿ: ವಿದ್ಯಾರ್ಥಿಗಳು, ಮಹಿಳೆಯರ ಆಕ್ರೋಶ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 3:26 IST
Last Updated 27 ಆಗಸ್ಟ್ 2021, 3:26 IST
ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ಮೈಸೂರು: ‘ಅತ್ಯಾಚಾರಿಗಳಿಗೆ ಕರುಣೆ ತೋರದಿರಿ’, ‘ಹೆಣ್ಣಿಗೆ ನೋವು ದೇಶದ ಅಳಿವು’, ‘ನಮ್ಮೆಲ್ಲರ ಚಿತ್ತ, ಅತ್ಯಾಚಾರಿಗಳ ಗಲ್ಲು ಶಿಕ್ಷೆಯತ್ತ’, ‘ಸ್ಟಾಪ್‌ ರೇಪ್‌’ ನೋ ಮರ್ಸಿ ಟು ರೇಪಿಸ್ಟ್‌..’ ಘೋಷಣೆಗಳು ನಗರದಲ್ಲಿ ಗುರುವಾರ ಮೊಳಗಿದವು.

ನಗರದಲ್ಲಿ ಮಂಗಳವಾರ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರದ ವಿರುದ್ಧ ವಿವಿಧ ಸಂಘಟನೆಗಳ ನೂರಾರು ಮಂದಿ ಸರಣಿ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಖಿಲ ಭಾರತ ಸಾಂಸ್ಕೃತಿಕ ಮಹಿಳಾ ಸಂಘಟನೆ, ಆಲ್‌ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್ ಆರ್ಗನೈಜೇಷನ್, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್, ಮಹಿಳಾ ರಕ್ಷಣಾ ಪಡೆ ಹಾಗೂಗಂಧದ ಗುಡಿ ಫೌಂಡೇಷನ್‌ನ ಕಾರ್ಯಕರ್ತರು ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಪ್ರತಿಭಟನೆ
ನಡೆಸಿದರು.

ADVERTISEMENT

’ನಗರದಲ್ಲಿ ಗುಂಡಿನ ದಾಳಿ ನಡೆಸಿ ಆಭರಣ ದೋಚಿದ ಬೆನ್ನಲ್ಲೇ ಸಾಮೂಹಿಕ ಅತ್ಯಾಚಾರದಂತಹ ಹೀನ ಕೃತ್ಯ ನಡೆದಿರುವುದು ಆತಂಕ ಮೂಡಿಸಿದೆ. ಆರೋಪಿಗಳನ್ನು ಬಂಧಿಸ ಬೇಕು’ ಎಂದು ಮುಖಂಡರಾದ ಜಿ.ಎಸ್.ಸೀಮಾ, ಟಿ.ಆರ್.ಸುನೀಲ್, ಒತ್ತಾಯಿಸಿದರು.

ಮುಖಂಡರಾದ ಸುಭಾಷ್, ಆಸಿಯಾ ಬೇಗಂ, ಸಿ.ಅಭಿನಂದನ್, ಸುಮಾ, ವೈ.ಎಸ್.ಅಭಿಷೇಕ್, ಶ್ವೇತಾ, ಆರ್ಯನ್, ಮನೋಹರ್, ಮೇಘನ್, ಲತಾಗೌಡ, ಮೇಘನಾಗೌಡ, ಅಮೀನಾ ಬೇಗಂ, ಅಶ್ವಿನಿ, ಮಂಜುಳಾ, ರಾಣಿ, ಮೇರಿ ಇದ್ದರು.

ನೂರಾರು ವಿದ್ಯಾರ್ಥಿಗಳು ಬಂದರು...

ಇಲ್ಲಿನ ರಾಮಸ್ವಾಮಿ ವೃತ್ತದ ಬಳಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನೇತೃತ್ವದಲ್ಲಿ 6 ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ‘ಅತ್ಯಾಚಾರಿಗಳನ್ನು ಶಿಕ್ಷಿಸಿ’ ಭಿತ್ತಿಪತ್ರ ಹಿಡಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.

‘ಕಾಲೇಜು ಯುವತಿಯರನ್ನು ಕಿಡಿಗೇಡಿಗಳು ಹಿಂಬಾಲಿಸುತ್ತಾರೆ. ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದಾಗ ಕಿರಿಕಿರಿ ತಂದೊಡ್ಡುತ್ತಾರೆ. ಅಂಥವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಶ್ರೀರಾಮ ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಮಲ್ಲಪ್ಪ, ನಗರ ಸಹಕಾರ್ಯದರ್ಶಿ ಕಿರಣ, ಕಾರ್ಯಕರ್ತರಾದ ನಂದಿನಿ, ನಮೃತಾ, ನಿಶ್ಚಿತಾ, ಕೃಪಾಲ, ಶ್ರೇಯಸ್ ಇದ್ದರು.

ಸರ್ಕಾರ ನಿದ್ದೆಯಿಂದ ಏಳಲಿ...

ಇಲ್ಲಿನ ಕಾಂಗ್ರೆಸ್‌ ಕಚೇರಿ ಮುಂಭಾಗ ಕಾಂಗ್ರೆಸ್‌ ಮಹಿಳಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಕಿಡಿಕಾರಿದರು.

‘ಸಾಮೂಹಿಕ ಅತ್ಯಾಚಾರ ಘಟನೆಯು ಕಾನೂನು ಮತ್ತುಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಸರ್ಕಾರ ನಿದ್ದೆಯಿಂದ ಎದ್ದೇಳಬೇಕು’ ಎಂದು ಆಗ್ರಹಿಸಿದರು.

ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಮುಖಂಡರಾದ ಲತಾಸಿದ್ಧಶೆಟ್ಟಿ,ಶೋಭಾ ಸುನೀಲ್, ಪುಷ್ಪಾವಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.