ADVERTISEMENT

ಶಾಲೆ ಉಳಿಸಲು ಆಗ್ರಹಿಸಿ ಮೌನ ಪ್ರತಿಭಟನೆ

ಶಾಲೆ ಉಳಿಯಲಿ, ಸ್ಮಾರಕವೂ ನಿರ್ಮಿತವಾಗಲಿ, ಮುಖ್ಯಮಂತ್ರಿಗಳ ಮಾತೂ ಉಳಿಯಲಿ ಎಂದ ಪ್ರತಿಭಟನಕಾರರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 4:46 IST
Last Updated 18 ಜೂನ್ 2021, 4:46 IST
ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಲು ಆಗ್ರಹಿಸಿ ಮಕ್ಕಳು, ಪೋಷಕರು, ಪ್ರತಿಭಟನಕಾರರು ಮೈಸೂರಿನ ಮಹಾರಾಣಿ ಅವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು
ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಲು ಆಗ್ರಹಿಸಿ ಮಕ್ಕಳು, ಪೋಷಕರು, ಪ್ರತಿಭಟನಕಾರರು ಮೈಸೂರಿನ ಮಹಾರಾಣಿ ಅವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಲು ಆಗ್ರಹಿಸಿ ಮಕ್ಕಳು, ಪೋಷಕರು, ಪ್ರತಿಭಟನಕಾರರು ಇಲ್ಲಿನ ಮಹಾರಾಣಿ ಅವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಮಹಾರಾಣಿ ಮಾದರಿ (ಎನ್.ಟಿ.ಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಿತ್ತಿಪತ್ರ ಹಿಡಿದ ಪ್ರತಿಭಟನಕಾರರು ಶಾಲೆ ಉಳಿಸುವಂತೆ ಆಗ್ರಹಿಸಿದರು.

ನಂತರ ಅವರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ADVERTISEMENT

ಮಹಾರಾಣಿ ಮಾದರಿ ಎನ್‌.ಟಿ.ಎಂ ಶಾಲೆಯನ್ನು ಉಳಿಸಿ ವಿವೇಕಾನಂದ ಅವರ ಸ್ಮಾರಕ ನಿರ್ಮಿಸುವಂತೆ ಹೇಳಿರುವ ಜಿಲ್ಲಾಧಿಕಾರಿಗಳ ವರದಿಯನ್ನು ಜಾರಿಗೆ ತರಬೇಕು ಎಂದು ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಸುಮಾರು 140 ವರ್ಷಗಳ ಇತಿಹಾಸ ಇರುವ ಪಾರಂಪರಿಕ ಶಾಲೆಯ ಕಟ್ಟಡವನ್ನು ಉಳಿಸಬೇಕಿದೆ. ಶಾಲೆಯ ಕಟ್ಟಡ ಉಳಿಸಿ, ಮಿಕ್ಕಿದ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಿಸಿ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆದೇಶವನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಶಾಲೆಯಲ್ಲಿ ಸದ್ಯ 61 ಮಕ್ಕಳು ಕಲಿಯುತ್ತಿದ್ದಾರೆ. ಶಾಲಾ ಜಾಗವನ್ನು ಹೊರತುಪಡಿಸಿ ಪೂರ್ವಪಶ್ಚಿಮವಾಗಿ 206 ಅಡಿಗಳು ಹಾಗೂ ಉತ್ತರ ದಕ್ಷಿಣವಾಗಿ 78 ಅಡಿಗಳಷ್ಟು ಜಾಗವಿದ್ದು, ಇಲ್ಲಿ ವಿವೇಕ ಸ್ಮಾರಕವನ್ನು ನಿರ್ಮಿಸಬಹುದು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಪತ್ರವನ್ನು ಪರಿಗಣಿಸಿ, ಹಿಂದಿನ ಆದೇಶದಲ್ಲಿ ತಿಳಿಸಿರುವಂತೆ ಶಾಲೆಯನ್ನು ಉಳಿಸಿಕೊಂಡು, ವಿವೇಕ ಸ್ಮಾರಕವನ್ನೂ ನಿರ್ಮಾಣ ಮಾಡಲು ಅನುಕೂಲವಾಗುವಂತೆ, ಈ ಹಿಂದೆ 2013ರಲ್ಲಿ ಹೊರಡಿಸಿರುವ ಸರ್ಕಾರಿ ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಮಧ್ಯೆ ನ್ಯಾಯಾಲಯವು 2013 ರ ಅದೇಶವನ್ನು ಎತ್ತಿ ಹಿಡಿದಿದ್ದರು ಸಹ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿ ಸೌಹಾರ್ದತೆ ದೃಷ್ಟಿಯಿಂದ ಪುನರ್‌ಪರಿಶೀಲಿಸಿ ಮರು ಆದೇಶ ಮಾಡುವ ಪರಮ ಅಧಿಕಾರ ಸರ್ಕಾರಕ್ಕೆ ಇರುತ್ತದೆ. ಹೀಗಾಗಿ,
ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡ ಶಾಲೆಯನ್ನು ಉಳಿಸಿಕೊಡಬೇಕು ಹಾಗೂ ಉಳಿಕೆ ಜಾಗದಲ್ಲಿ ವಿವೇಕ ಸ್ಮಾರಕವನ್ನು ನಿರ್ಮಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ‘ನಾವು ವಿವೇಕ ಸ್ಮಾರಕದ ವಿರೋಧಿಗಳು ಅಲ್ಲ. ಶಾಲೆ ಉಳಿಸಲು ಸುಪ್ರೀಂಕೋರ್ಟ್‌ ಮೊರೆ ಹೋಗಲು ಚಿಂತಿಸಲಾಗಿದೆ’ ಎಂದರು.

ಒಕ್ಕೂಟದ ಪ್ರಧಾನ ಸಂಚಾಲಕ ಸ.ರ.ಸುದರ್ಶನ, ಕನ್ನಡ ಚಳವಳಿ ಕೇಂದ್ರ ಸಮಿತಿಯ ಮೂಗೂರು ನಂಜುಂಡಸ್ವಾಮಿ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಸಿ, ಪರಶುರಾಮ್, ಹೋರಾಟಗಾರರಾದ ಹೊಸಕೋಟೆ ಬಸವರಾಜು, ಜಾಕೀರ್‌ಹುಸೇನ್, ಅರವಿಂದ ಶರ್ಮಾ, ಭಾನುಮೋಹನ್, ಡೈರಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.