ADVERTISEMENT

30,129 ವಿದ್ಯಾರ್ಥಿಗಳ ಹಾಜರಿ

ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ; ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಪಾಲನೆಯಾಗದ ಕನಿಷ್ಠ ಅಂತರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 15:56 IST
Last Updated 18 ಜೂನ್ 2020, 15:56 IST
ಮೈಸೂರಿನಲ್ಲಿ ಗುರುವಾರ ಮಹಾರಾಣಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಥರ್ಮಲ್‌ ಸ್ಕ್ರೀನಿಂಗ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು
ಮೈಸೂರಿನಲ್ಲಿ ಗುರುವಾರ ಮಹಾರಾಣಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಥರ್ಮಲ್‌ ಸ್ಕ್ರೀನಿಂಗ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿನ 50 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ನಡೆದ ದ್ವಿತೀಯ ಪಿಯು ಇಂಗ್ಲಿಷ್ ಭಾಷಾ ವಿಷಯದ ಪರೀಕ್ಷೆಗೆ 30,129 ವಿದ್ಯಾರ್ಥಿಗಳು ಹಾಜರಾದರು.

ಜಿಲ್ಲೆಯಲ್ಲಿ 31,542 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. 1413 ವಿದ್ಯಾರ್ಥಿಗಳು ಗೈರಾಗಿದ್ದರು. ಇವರಲ್ಲಿ ಹೊರರಾಜ್ಯದ ಮೂವರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಜಿ.ಆರ್.ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆ.ಆರ್.ನಗರದಲ್ಲಿ ಕಂಟೈನ್‌ಮೆಂಟ್ ಪ್ರದೇಶದಿಂದ ಪರೀಕ್ಷೆ ಬರೆಯಲಿಕ್ಕಾಗಿ ಬಂದಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ಅಲ್ಲಿಯೇ ಹಾಗೂ ಜ್ವರದ ಲಕ್ಷಣವಿದ್ದ 12 ವಿದ್ಯಾರ್ಥಿಗಳಿಗೆ ನಂಜನಗೂಡಿನ ಜೆಎಸ್‌ಎಸ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಯಾವೊಬ್ಬ ವಿದ್ಯಾರ್ಥಿಯೂ ಡಿಬಾರ್ ಆಗಿಲ್ಲ ಎಂದು ಅವರು ಹೇಳಿದರು.

ಪೋಷಕರ ಆಕ್ರೋಶ: ಮೈಸೂರಿನ ಮಹಾರಾಣಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಪೋಷಕರು ಪ್ರಾಂಶುಪಾಲ ಸೋಮಣ್ಣ ವಿರುದ್ಧ ಹರಿಹಾಯ್ದರು.

ಪೋಷಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪ್ರಾಂಶುಪಾಲ ಸೋಮಣ್ಣ ‘ಪರೀಕ್ಷೆ ನಡೆಸಲು ಅವಕಾಶ ಕೊಡಿ’ ಎಂದು ಜಮಾಯಿಸಿದ್ದ ಜನರ ಬಳಿ ಮನವಿ ಮಾಡಿಕೊಂಡ ದೃಶ್ಯ ಗೋಚರಿಸಿತು.

‘ಯಾವೊಂದು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ. ಮಕ್ಕಳಿಗೆ ಸರಿಯಾಗಿ ಮಾರ್ಗದರ್ಶನ ನೀಡುತ್ತಿಲ್ಲ. ಕಾಲೇಜಿನ ಆವರಣದಲ್ಲಿ ಅಧ್ವಾನದ ವ್ಯವಸ್ಥೆಯಿದೆ’ ಎಂದು ಪೋಷಕರು ಕಿಡಿಕಾರಿದರು.

ಹೇಳಿಕೆಗಷ್ಟೇ ಸೀಮಿತ: ಕನಿಷ್ಠ ಅಂತರ ಕಾಪಾಡಿಕೊಳ್ಳುವಿಕೆ ಪರೀಕ್ಷಾ ಕೇಂದ್ರದೊಳಗಷ್ಟೇ ಪಾಲನೆಯಾಯಿತು. ಹಲವು ಕಡೆ ಹೊರ ಭಾಗದಲ್ಲಿ ಕಿಂಚಿತ್ ಪಾಲನೆಯಾಗಲಿಲ್ಲ.

ನಿಗದಿತ ಅವಧಿಗೂ ಮುನ್ನವೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿಗಳು, ಒಳ ಪ್ರವೇಶಿಸಲು ಕನಿಷ್ಠ ಅಂತರ ಕಾಪಾಡಿಕೊಳ್ಳದೇ ಸರತಿ ಸಾಲಿನಲ್ಲಿ ತೆರಳುತ್ತಿದ್ದ ಚಿತ್ರಣ ಬಹುತೇಕ ಪರೀಕ್ಷಾ ಕೇಂದ್ರಗಳ ಮುಂಭಾಗ ಗೋಚರಿಸಿತು. ಮಕ್ಕಳನ್ನು ಪರೀಕ್ಷೆಗಾಗಿ ಕರೆದುಕೊಂಡು ಬಂದಿದ್ದ ಪೋಷಕರು ಹೊರ ಭಾಗದಲ್ಲೇ ಗುಂಪಾಗಿ ಜಮಾಯಿಸಿದ್ದರು.

‘ಒಂದು ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುವುದು. ಜಿಗ್‌ಜಾಗ್‌ ಮಾದರಿಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸಲಾಗುವುದು’ ಎಂಬ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಹೇಳಿಕೆ ಪಾಲನೆಯಾಗಲಿಲ್ಲ. ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಈ ಹಿಂದಿನಂತೆಯೇ ಇಬ್ಬಿಬ್ಬರು ವಿದ್ಯಾರ್ಥಿಗಳು ಕೂತು ಪರೀಕ್ಷೆ ಬರೆದ ಚಿತ್ರಣ ಕಂಡು ಬಂದಿತು.

ಕಡ್ಡಾಯವಾಗಿದ್ದ ಮಾಸ್ಕ್‌

ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿ ಪ್ರವೇಶಿಸಬೇಕಾದರೆ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಹಲವು ಕಾಲೇಜುಗಳಲ್ಲಿ ಎರಡ್ಮೂರು ಪ್ರವೇಶ ದ್ವಾರ ತೆರೆಯಲಾಗಿತ್ತು. ಪ್ರತಿ ದ್ವಾರದಲ್ಲೂ ಆಯಾ ಕಾಲೇಜಿನ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಿದರು. ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಪ್ರತಿಯೊಬ್ಬ ವಿದ್ಯಾರ್ಥಿ ಕೈಗೂ ಸ್ಯಾನಿಟೈಸರ್ ಹಾಕಿಯೇ ಕಳುಹಿಸಿದ ಚಿತ್ರಣ ವಿವಿಧೆಡೆ ಗೋಚರಿಸಿತು.

ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿ ಗೊತ್ತಾಗದೆ ವಿದ್ಯಾರ್ಥಿಗಳು ಪರದಾಡಿದರು. ಕನಿಷ್ಠ ಅಂತರ ಪಾಲನೆಯಾಗದೆ ಸರತಿಯಲ್ಲೇ ನಿಂತಿದ್ದರು.

ಹುಣಸೂರು ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ಬೈಕ್‌ನಲ್ಲೇ ಬಂದರು...

‘ಬಸ್ ಸೌಲಭ್ಯ ಸಿಗಲಿಲ್ಲ. ಬೆಳಿಗ್ಗೆ 7.30ಕ್ಕೆ ಊರು ಬಿಟ್ಟೆವು. 55 ಕಿ.ಮೀ. ಪ್ರಯಾಣಿಸಿ 8.40ರ ವೇಳೆಗೆ ಮೈಸೂರಿನ ಪರೀಕ್ಷಾ ಕೇಂದ್ರ ತಲುಪಿದೆವು. ಮಗಳು ಪರೀಕ್ಷೆ ಬರೆಯಲು ಕೇಂದ್ರದೊಳಕ್ಕೆ ಹೋದಾಗ ಮನಸ್ಸು ನಿರಾಳವಾಯ್ತು’ ಎಂದು ನಂಜನಗೂಡು ತಾಲ್ಲೂಕಿನ ಮಾಕಣಪುರದ ಗೋವಿಂದರಾಜು ತಿಳಿಸಿದರು.

‘ನಾವಿರೋದು ಕೆ.ಆರ್.ಮಿಲ್‌ ಬಳಿ. ಕೋವಿಡ್ ಭಯದಿಂದ ಅಪ್ಪ ಬೈಕ್‌ನಲ್ಲೇ ಪರೀಕ್ಷಾ ಕೇಂದ್ರಕ್ಕೆ ಕರೆ ತಂದರು’ ಎಂದು ಮರಿಮಲ್ಲಪ್ಪ ಕಾಲೇಜಿನ ಕೆ.ಚರಣ್‌ರಾಜ್ ತಿಳಿಸಿದರೆ, ‘ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಇದ್ದುದರಿಂದ ಅಭ್ಯಾಸ ನಿರಂತರವಾಗಿತ್ತು. ಪರೀಕ್ಷೆ ಕಷ್ಟ ಎನಿಸಲಿಲ್ಲ’ ಎಂದು ಎನ್.ಚಂದನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.