ADVERTISEMENT

ಸಾರ್ವಜನಿಕ ಕೆಲಸಕ್ಕೆ ವಿಳಂಬ ಬೇಡ: ಸಂಸದ ಸುನಿಲ್ ಬೋಸ್

ತಿ.ನರಸೀಪುರ: ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ, ಜನ‌ಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:37 IST
Last Updated 29 ಜನವರಿ 2026, 6:37 IST
ತಿ.ನರಸೀಪುರ ಪಟ್ಟಣದ ಪುರಸಭಾ ಸಭಾಂಗಣ ದಲ್ಲಿ ಬುದವಾರ ಸಂಜೆ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ‌ ಸಭೆಯಲ್ಲಿ ಸಂಸದ ಸುನಿಲ್ ‌ಬೋಸ್ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವುದು
ತಿ.ನರಸೀಪುರ ಪಟ್ಟಣದ ಪುರಸಭಾ ಸಭಾಂಗಣ ದಲ್ಲಿ ಬುದವಾರ ಸಂಜೆ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ‌ ಸಭೆಯಲ್ಲಿ ಸಂಸದ ಸುನಿಲ್ ‌ಬೋಸ್ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವುದು   

ತಿ.ನರಸೀಪುರ: ‘ಸಾರ್ವಜನಿಕ‌ರ ಕೆಲಸ ಕಾರ್ಯಗಳಿಗೆ ಅಧಿಕಾರಿಗಳು ವಿಳಂಬ ಮಾಡಬಾರದು. ಅವರ ಅಹವಾಲು ಕೇಳಿ ಸೂಕ್ತ ಕೆಲಸಗಳನ್ನು ಮಾಡಿಕೊಡಬೇಕು’ ಎಂದು ಸಂಸದ ಸುನಿಲ್ ಬೋಸ್ ಸೂಚಿಸಿದರು.

ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಹಾಗೂ ಜನ‌ಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ‘ಉಸ್ತುವಾರಿ ಸಚಿವರ ಕಾರ್ಯದೊತ್ತಡ ಹಾಗೂ ನನ್ನ ಕ್ಷೇತ್ರ ವ್ಯಾಪ್ತಿ ದೊಡ್ಡದಿರುವುದರಿಂದ ನಾವು ಬರಲಿಲ್ಲ ಎಂದು ಸಾರ್ವಜನಿಕ‌ ಕಾರ್ಯಗಳು ವಿಳಂಬವಾಗಬಾರದು’ ಎಂದರು.

‘ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಲು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಗಮನಕ್ಕೆ ತಂದು ದಿನಾಂಕ ನಿಗದಿ ಮಾಡುವುದಾಗಿ’ ತಿಳಿಸಿದರು.

ADVERTISEMENT

ಲ್ಯಾಪ್‌ಟಾಪ್ ವಿತರಣೆ ವೇಳೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ವಿತರಣೆ ಮಾಡಿರುವ ಬಗ್ಗೆ ಕೆಲ ಮುಖಂಡರು ಆರೋಪಿಸಿದ ಹಿನ್ನೆಲೆಯಲ್ಲಿ, ಸಂಸದ ಸುನಿಲ್ ಬೋಸ್ ಅವರು, ವಿತರಣೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡದಿರುವ ಬಗ್ಗೆ ಬನ್ನೂರು ಪುರಸಭಾ ಮುಖ್ಯಾಧಿಕಾರಿ ಹೇಮಂತ್ ರಾಜ್ ಅವರನ್ನು ಪ್ರಶ್ನಿಸಿದರು.

ಹೇಮಂತ್ ರಾಜ್ ಅವರು, ‘ತಾವು ರಜೆಯಲ್ಲಿದ್ದ ಸಮಯದಲ್ಲಿ ವಿತರಣೆಯಾಗಿದೆ’ ಎಂದು ತಿಳಿಸಿದ್ದರಿಂದ ಶಿಷ್ಟಾಚಾರ ಪಾಲನೆ ಮಾಡದೇ ಹೇಗೆ ವಿತರಿಸಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

ಬನ್ನೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪ‌ ನಿರ್ವಹಣೆ ಇಲ್ಲದಿರುವ ಬಗ್ಗೆ ಅನೇಕ ಬಾರಿ ಪುರಸಭೆ ಗಮನಕ್ಕೆ ತಂದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಕೆಲ ಮುಖಂಡರು ಆರೋಪಿಸಿದರು. ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ‌ವಹಿಸುವಂತೆ ಸಂಸದರು ಸೂಚಿಸಿದರು.

ತಹಶೀಲ್ದಾರ್‌ ಸುರೇಶ್ ಆಚಾರ್, ಜಿ.ಪಂ. ಎಇಇ ಚರಿತಾ, ಲೋಕೋಪಯೋಗಿ ಇಲಾಖೆ ಎಇಇ ಸತೀಶ್ ಚಂದ್ರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಾಂತ, ಸೆಸ್ಕ್ ಎಇಇ ವಿರೇಶ್, ಬಿಇಒ‌ ಶಿವಮೂರ್ತಿ, ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಇನ್‌ಸ್ಪೆಕ್ಟರ್ ಧನಂಜಯ್, ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಕುಕ್ಕೂರು ಗಣೇಶ್, ಸೋಸಲೆ ಮಹದೇವಸ್ವಾಮಿ, ರಾಮಲಿಂಗಯ್ಯ, ದಿವಾಕರ್, ಉಕ್ಕಲಗೆರೆ ಬಸವಣ್ಣ, ಮುನಾವರ್ ಪಾಷಾ, ತುಂಬಲ ಪ್ರಕಾಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.