ADVERTISEMENT

ಮೈಸೂರು: ಅವಜ್ಞೆಗೆ ಒಳಗಾದ ಬಯಲು ರಂಗ ಮಂದಿರದ ಹೊರಾಂಗಣ

ಕಳೆ ತುಂಬಿದ ಬಯಲು ರಂಗ ಮಂದಿರ l ನಿರ್ವಹಣೆ ಪಾಲಿಕೆಗೆ ಬಲುಭಾರವೇ?

ಮೋಹನ್ ಕುಮಾರ ಸಿ.
Published 31 ಜುಲೈ 2025, 5:11 IST
Last Updated 31 ಜುಲೈ 2025, 5:11 IST
ಮೈಸೂರಿನ ಪುರಭವನ ಆವರಣದ ‘ರಂಗಾಚಾರ್ಲು ಸ್ಮಾರಕ ಮಕ್ಕಳ ಆಟದ ಮೈದಾನ’ ಕಳೆಗಿಡ, ಅನೈರ್ಮಲ್ಯದಿಂದ ತುಂಬಿದೆ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಪುರಭವನ ಆವರಣದ ‘ರಂಗಾಚಾರ್ಲು ಸ್ಮಾರಕ ಮಕ್ಕಳ ಆಟದ ಮೈದಾನ’ ಕಳೆಗಿಡ, ಅನೈರ್ಮಲ್ಯದಿಂದ ತುಂಬಿದೆ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಸ್ಮೃತಿಯನ್ನು ಯಾವ ಮಟ್ಟಿಗೆ ಅಳಿಸಬಹುದು, ಅವಜ್ಞೆ ತೋರಬಹುದು ಎಂಬುದಕ್ಕೆ ‍ಪಾಲಿಕೆಗೆ ಸೇರಿರುವ ‘ಪುರಭವನ’ವೇ ಸಾಕ್ಷಿ. 

ಹೂದೋಟದಿಂದ ಕಂಗೊಳಿಸುತ್ತಿದ್ದ ಆವರಣ, ಮೂತ್ರ ವಿಸರ್ಜನೆಯ ತಾಣವಾಗಿದೆ. ರಸ್ತೆ, ಅಕ್ಕಪಕ್ಕದ ಕಟ್ಟಡ ಕಾಮಗಾರಿಗಳಿಗೆ ಬೇಕಾದ ಜಲ್ಲಿ, ಮರಳು ಸುರಿಯುವ ಸ್ಥಳವಾಗಿ ಬದಲಾಗಿದೆ.

ಕಟ್ಟಡದ ಶತಮಾನೋತ್ಸವ ಸಂದರ್ಭದಲ್ಲಿ ಅಭಿವೃದ್ಧಿ ಪಡಿಸಿದ ‘ರಂಗಾಚಾರ್ಲು ಸ್ಮಾರಕ ಮಕ್ಕಳ ಆಟದ ಮೈದಾನ’ವೂ ತೀವ್ರ ಅಸಡ್ಡೆಗೆ ಒಳಗಾಗಿದ್ದು, ಅಲ್ಲಿ ಮಕ್ಕಳ ಆಟಿಕೆ ಪರಿಕರಗಳೇ ಮಾಯವಾಗಿವೆ. ಜೀವಂತ ಐತಿಹಾಸಿಕ ಸ್ಮಾರಕದ ಆವರಣದ ಕೆಲಭಾಗವಷ್ಟೇ ಉದ್ಯಾನ ಉಳಿದಿದೆ. ಉಳಿದದ್ದೆಲ್ಲ ಕಸ ತುಂಬಿದೆ.

ADVERTISEMENT

‘ಶಾಂತಿವನ’ ಕರೆಯಲಾಗುತ್ತಿದ್ದ ಭಾಗದಲ್ಲಿ ‘ಪಾರಂಪರಿಕ ಶೌಚಾಲಯ’ವನ್ನು ಪಾಲಿಕೆ ಕಟ್ಟಿದೆ. ಅದರ ಹಿಂಭಾಗದಲ್ಲಿಯೇ ಅನೈರ್ಮಲ್ಯ ತಾಂಡವವಾಡುತ್ತಿದೆ. ಕೆಲವರು ಕಾರು, ಸ್ಕೂಟರ್ ನಿಲ್ಲಿಸುವ ತಾಣವನ್ನಾಗಿ ಮಾಡಿಕೊಂಡಿದ್ದು, ಅವರನ್ನು ಕೇಳುವವರು ಯಾರೂ ಇಲ್ಲ.

ಕಳೆ ತುಂಬಿದ ಬಯಲು ರಂಗಮಂದಿರ: ಆವರಣಕ್ಕೆ ಹೊಂದಿಕೊಂಡಂತೆ ಹೊಸದಾಗಿ ನಿರ್ಮಾಣ ಮಾಡಿರುವ ಬಯಲು ರಂಗಮಂದಿರದಲ್ಲೂ ಕಳೆಸಸ್ಯಗಳು ಬೆಳೆದಿವೆ.

‘ಕಳೆದ ಒಂದು ವರ್ಷದಿಂದ ಬಯಲು ರಂಗಮಂದಿರದಲ್ಲಿ ಯಾವುದೇ ಕಾರ್ಯಕ್ರಮವೂ ನಡೆದಿಲ್ಲ. 2023ರ ಕೊನೆಯಲ್ಲಿ ಒಂದು ಸನ್ಮಾನ ಕಾರ್ಯಕ್ರಮ ನಡೆದಿತ್ತಷ್ಟೇ’ ಎನ್ನುತ್ತಾರೆ ಕಲಾಭಿಮಾನಿ ಚೋರನಹಳ್ಳಿ ಮೂರ್ತಿ. 

ಪಟ್ಟ ತಪ್ಪಿದ ಕಾರಣ ಇಲ್ಲೇ ಇದೆ: ಸ್ವಚ್ಛ ನಗರಿಯ ಗರಿಯು ಎಲ್ಲಿ ತಪ್ಪಿ ಹೋಯಿತು ಎಂಬುದರ ವಿಮರ್ಶೆಯನ್ನು ಪಾಲಿಕೆ ಅಧಿಕಾರಿಗಳು ಕಳೆದ ಹತ್ತು ವರ್ಷದಿಂದ ಮಾಡುತ್ತಲೇ ಇದ್ದಾರೆ. ‘ಸತತವಾಗಿ ಇಂದೋರ್‌ಗೇಕೆ ಸ್ವಚ್ಛ ನಗರಿಯ ಪಟ್ಟ ಸಿಗುತ್ತದೆಂದು ಅರ್ಥ ಮಾಡಿಕೊಳ್ಳಲು ಪಾಲಿಕೆ ಕೆಲ ವರ್ಷದ ಹಿಂದೆ ನಿಯೋಗವೊಂದನ್ನೂ ಕಳುಹಿಸಿತ್ತು. ಅರಮನೆಗೆ ಕೆಲವೇ ಮೀಟರ್‌ಗಳ ದೂರವಿರುವ ಈ ಕಟ್ಟಡದ ನಿರ್ವಹಣೆ ಕಣ್ಣೆದುರೇ ಕಾಣುವಾಗ, ಪಟ್ಟ ತಪ್ಪಿಹೋದ ಕಾರಣ ಅರ್ಥ ಮಾಡಿಕೊಳ್ಳಲು ದಶಕ ಬೇಕೆ’ ಎಂದು ಕೇಳುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು. 

‘ಒಂದು ಕಾಲದಲ್ಲಿ ವಿದೇಶಿ ಪ್ರವಾಸಿಗರು ದಸರೆಗೆ ಬಂದಾಗ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದರು. ಅರಮನೆಯಷ್ಟೇ ಅಲ್ಲದೇ ಪಾರಂಪರಿಕ ಕಟ್ಟಡಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಒಂದೊಂದೇ ಸ್ಮಾರಕವು ಅವಸಾನದತ್ತ ಸಾಗುತ್ತಿದೆ. ಉಳಿದ ಕೆಲವೇ ಕಟ್ಟಡಗಳು ಉರುಳಿದರೆ ಪಾರಂಪರಿಕ ನಗರಿ ಉಳಿಯುವುದೆಲ್ಲಿ’ ಎಂದು ಪ್ರಶ್ನಿಸಿದರು. 

ಉದ್ಯಾನದಲ್ಲಿ ಎಂಸ್ಯಾಂಡ್‌ ಸುರಿದಿರುವುದು  

‘ಆಳಿದ ಮಹಾಸ್ವಾಮಿ’ಗಳಿಗೆ ನೆಚ್ಚು ಆಳಿದ ಮಹಾಸ್ವಾಮಿಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹುಟ್ಟಿದ ವರ್ಷವಾದ 1884ರಲ್ಲಿಯೇ ಪುರಭವನ ನಿರ್ಮಾಣ ಕಾಮಗಾರಿ ಆರಂಭವಾಯಿತು. ಅರಮನೆ ಅನತಿ ದೂರದಲ್ಲಿಯೇ ಇದ್ದ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಪುಟಾಣಿ ನಾಲ್ವಡಿ ಅವರೊಂದಿಗೆ ನಾಟಕ ನೋಡಲು ಚಾಮರಾಜೇಂದ್ರ ಒಡೆಯರ್ ಅವರು ಬರುತ್ತಿದ್ದರಂತೆ. ಹೀಗಾಗಿಯೇ ಕಲೆ– ಸಂಸ್ಕೃತಿಗೆ ಅಪಾರ ಪ್ರೋತ್ಸಾಹವನ್ನು ಅವರು ನೀಡಿದರು.  ಗುಬ್ಬಿ ಚನ್ನಬಸವೇಶ್ವರ ಕೃಪಾ‍ ಪೋಷಿತ ನಾಟಕ ಮಂಡಳಿಯ ಗುಬ್ಬಿ ವೀರಣ್ಣನವರ ನಾಟಕದ ಅಭಿನಯ ನೋಡಿದ ಆಳಿದ ಮಹಾಸ್ವಾಮಿಗಳು ಆನೆಯೊಂದನ್ನು ಉಡುಗೊರೆಯಾಗಿ ಇದೇ ಪುರಭವನದಲ್ಲಿ ನೀಡಿದ್ದರು.  ಅಲ್ಲದೇ ‘ವರ್ಸಟೈಲ್ ಕಾಮಿಡಿಯನ್’ ಎಂಬ ಬಿರುದನ್ನು ವೀರಣ್ಣ ಅವರಿಗೆ ಕೊಟ್ಟಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.