ಮೈಸೂರು: ಅದು 1875. ಪಾರ್ಸಿ, ಮರಾಠಿ ರಂಗಭೂಮಿಯ ನಾಟಕಗಳು ದೇಶದಲ್ಲಿ ಸಂಚಲನ ಮೂಡಿಸಿದ್ದವು. ರಾಜ್ಯದಲ್ಲಿ ಯಕ್ಷಗಾನ– ಬಯಲಾಟಗಳು ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿದ್ದವು. ಈ ವೇಳೆ ಕನ್ನಡ ರಂಗಭೂಮಿಗೆ ಚೈತನ್ಯ ತುಂಬಿದ್ದೇ 10ನೇ ಚಾಮರಾಜೇಂದ್ರ ಒಡೆಯರ್ ಮತ್ತು ದಿವಾನ್ ರಂಗಾಚಾರ್ಲು! ಅವರ ಹೆಸರಿನ ಪುರಭವನವೀಗ ನಿರ್ಲಕ್ಷ್ಯದಿಂದಾಗಿ ಕತ್ತಲಲ್ಲಿದೆ!
ರಂಗಾಚಾರ್ಲು ಕಲೆ ಹಾಗೂ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ್ದಲ್ಲದೇ ಸಂಸ್ಕೃತ ವಿದ್ವಾಂಸ, ಅಭಿನವ ಕಾಳಿದಾಸ ಎಂದೇ ಹೆಸರಾಗಿದ್ದ ಬಸವಪ್ಪ ಶಾಸ್ತ್ರಿ ಅವರಿಂದ ಹತ್ತಾರು ನಾಟಕಗಳನ್ನು ಭಾಷಾಂತರಿಸಲು ಪ್ರೋತ್ಸಾಹಿಸಿದರು. 1882ರಲ್ಲಿ ಮಹಾರಾಜರು ಸ್ಥಾಪಿಸಿದ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾಕ್ಕೆ ಸಂಸ್ಕೃತದ ‘ರತ್ನಾವಳಿ ವಿಕ್ರಮೋರ್ವಶೀಯ’, ‘ಉತ್ತರರಾಮಚರಿತ’ ಮತ್ತು ‘ಚಂಡಕೌಶಿಕ’ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದರು.
ಬಸವಪ್ಪ ಶಾಸ್ತ್ರಿಗಳ ನಾಟಕಗಳು ಪ್ರದರ್ಶನಗೊಂಡು ವೃತ್ತಿ ರಂಗಭೂಮಿಗೆ ಚೈತನ್ಯ ಸಿಕ್ಕಿತ್ತು. ಅದು ಪುರಭವನದ ಸ್ಥಾಪನೆಗೂ ಕಾರಣವಾಯಿತು. ಶಾಸ್ತ್ರಿ ಅವರು ಸ್ವತಃ ‘ಶಾಕುಂತಲಾ ನಾಟಕ ಕಂಪನಿ’ಯನ್ನೂ ಸ್ಥಾಪಿಸಿದ್ದರು. ಇಂಗ್ಲಿಷ್‌ನ ಷೇಕ್ಸ್‌ಪಿಯರ್‌ನ ‘ಒಥೆಲೊ’ ನಾಟಕವನ್ನು ‘ಶೂರಸೇನ ಚರಿತ್ರೆ’ ಆಗಿಸಿದ್ದರು.
ಮಾದರಿ ಭವನ: ವೃತ್ತಿ ರಂಗಭೂಮಿ ವಿಸ್ತಾರವಾಗಿ ಬೆಳೆಯಲು ಮೈಸೂರು ವೇದಿಕೆ ಒದಗಿಸಿತ್ತು. ಪುರಭವನದ ಮಾದರಿಯಲ್ಲಿಯೇ ಬೆಂಗಳೂರಿನ ಕೆ.ಪಿ.ಪುಟ್ಟಣ್ಣಚೆಟ್ಟಿ ಪುರಭವನ 1933ರಲ್ಲಿ ಸ್ಥಾಪನೆಯಾಯಿತು. ಅದಕ್ಕೆ ಶಿಲಾನ್ಯಾಸ ನೆರವೇರಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಮೈಸೂರಿನ ಪುರಭವನ ಸುರ್ಕಿಗಾರೆಯದ್ದಾದರೆ, ಬೆಂಗಳೂರಿನದು ಕಲ್ಲಿನದ್ದು.
ಜನರು ಮುಗಿಬೀಳುತ್ತಿದ್ದರು: ‘ಗುಬ್ಬಿ ವೀರಣ್ಣ ಅವರ ‘ಶ್ರೀ ಚನ್ನಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ’, ಸುಬ್ಬಯ್ಯ ನಾಯ್ಡು ಅವರು ‘ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’, ‘ಹಿರಣ್ಣಯ್ಯ ಮಿತ್ರ ಮಂಡಳಿ’, ಮೊಹಮ್ಮದ್ ಪೀರ್ ಅವರ ‘ಚಂದ್ರಕಲಾ ನಾಟಕ ಮಂಡಳಿ’, ಎ.ವಿ.ವರದಾಚಾರ್ ಅವರ ‘ರತ್ನಾವಳಿ ಥಿಯೆಟ್ರಿಕಲ್ಸ್’ ಸೇರಿದಂತೆ ದೊಡ್ಡ ಕಂಪನಿ ನಾಟಕಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದನ್ನು ಕೇಳಿದ್ದೇನೆ’ ಎಂದು ರಂಗಕರ್ಮಿ ರಾಜಶೇಖರ ಕದಂಬ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರಾಮೀಣ ಭಾಗದಲ್ಲಿಯೇ ನಾನು ಹೆಚ್ಚು ನಾಟಕಗಳನ್ನು ಆಡಿದ್ದು, ಪುರಭವನದಲ್ಲಿ ಮೊದಲು ನಾಟಕ ನೋಡಿದ್ದು 1964ರಲ್ಲಿ. ತಂದೆ ರಾಚಪ್ಪ ಅವರೂ ನಾಟಕದ ಮಾಸ್ಟರ್ ಆಗಿದ್ದರು. ಗ್ರಾಮೀಣ ಭಾಗದವರು ಹೆಚ್ಚು ಖರ್ಚಿಲ್ಲದೇ ನಾಟಕವಾಡುವಂಥ ವ್ಯವಸ್ಥೆ ಇಲ್ಲಿತ್ತು. ಮಹದೇವಸ್ವಾಮಿ, ಹೊನ್ನಪ್ಪ ಭಾಗವತಾರ್, ರಾಜ್‌ಕುಮಾರ್ ಶ್ರೇಷ್ಠ ರಂಗನಟರಾಗಿದ್ದರು. ಆಗ ಪೌರಾಣಿಕ ನಾಟಕಗಳು ಸಂಪ್ರದಾಯಬದ್ಧವಾಗಿ ಆಡಲಾಗುತ್ತಿತ್ತು. ಕಲಾವಿದರೂ ಸೊರಗಿದಂತೆ ಪುರಭವನವೂ ಈಗ ಸೊರಗಿದೆ. ಅಲ್ಲಿಗೆ ಹೋದಾಗೆಲ್ಲ ಬೇಸರವಾಗುತ್ತದೆ’ ಎನ್ನುತ್ತಾರೆ ಹಿರಿಯ ರಂಗಕರ್ಮಿ ಕಿರಗಸೂರು ರಾಜಪ್ಪ.
ರಾಜ್ಯದ ಮಾದರಿ ಭವನ ಬೆಂಗಳೂರಿಗೂ ಸ್ಫೂರ್ತಿ ರಂಗೋತ್ಸವಗಳಿಗೆ ಸಾಕ್ಷಿ
ಭವ್ಯತೆ ದಿವ್ಯತೆಯೂ ಹೀಗಿತ್ತು... ಪುರಭವನದ ಒಳಾಂಗಣ ಭವ್ಯವಾಗಿತ್ತು. ‘ಸುರುಳಿ ಸುತ್ತುವ ಚಿತ್ರಿತ ಜಾರು ಪರದೆಗಳಿರುವುದು ರಾಜ್ಯದಲ್ಲಿ ಇದೊಂದೇ ರಂಗಮಂದಿರದಲ್ಲಿ ಮಾತ್ರ’ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. 1988 ಹಾಗೂ 2003–04ರಲ್ಲಿ ಪುನರ್‌ನವೀಕರಣಗೊಂಡು ಆಸನ ಧ್ವನಿ ವ್ಯವಸ್ಥೆಯಲ್ಲಿ ಸುಧಾರಣೆ ಕಂಡರೂ ಮೊದಲಿದ್ದ ವೈಭವ ಈಗಿಲ್ಲ. ಏನೇನಿತ್ತು?: ಭವನದ 22 ಅಡಿ ಅಗಲ ಹಾಗೂ 27 ಅಡಿ ಆಳವಿರುವ ಮರದ ರಂಗಸ್ಥಳದಲ್ಲಿ 8 ಜೊತೆ ಸೈಡ್ ವಿಂಗ್‌ಗಳು 5 ತೋರಣಗಳಿದ್ದವು. ಬಿದಿರಿನ ಅಟ್ಟಣಿಗೆಗಳು 5 ಅಡಿ ವಿಂಗ್ಸ್ ಸ್ಪೇಸ್ ಎರಡು ಗ್ರೀನ್ ರೂಂಗಳಿದ್ದವು. ಒಂದು ನೆಲಮಾಳಿಗೆಯಲ್ಲಿ ಬಾಗಿಲಿತ್ತು. ಈಗದನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ರಂಗಭೂಮಿಯ ಶತಮಾನೋತ್ಸವಕ್ಕೆ ಸಾಕ್ಷಿ: ‘ಕನ್ನಡ ರಂಗಭೂಮಿಗೆ ಶತಮಾನ ಎಂಬ ಕಾರ್ಯಕ್ರಮ 40ರ ದಶಕದಲ್ಲಿ ಪುರಭವನದಲ್ಲಿ ನಡೆದಿತ್ತು. ಜಯಚಾಮರಾಜೇಂದ್ರ ಒಡೆಯರ್ ಸಿ.ರಾಜಗೋಪಾಲಚಾರಿ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅಂಬಳೆ ವಿ.ಸುಬ್ರಹ್ಮಣ್ಯ ಅಯ್ಯರ್ ಗುಬ್ಬಿ ವೀರಣ್ಣ ಕೆ.ನಂದಿಬಸಪ್ಪ ಎಂ.ಸಿ.ಮಹದೇಸ್ವಾಮಿಯಂಥ ದಿಗ್ಗಜರು ಹಾಜರಿದ್ದರು’ ಎಂಬುದನ್ನು ಇತಿಹಾಸ ತಜ್ಞ ಈಚನೂರು ಕುಮಾರ್ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.