ಮೈಸೂರು: ಆಕಾಶವಾಣಿ ಮೈಸೂರು, ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‌ಟಿಆರ್‌ಐ), ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ, ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ನಮ್‌ಕಂಪನಿ’ ರೈತ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತು ಬಾನುಲಿ ಸರಣಿಗೆ ಸೋಮವಾರ ಚಾಲನೆ ನೀಡಲಾಯಿತು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿತು.
ಮಂಡ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ‘ಆಹಾರ ಉತ್ಪಾದನೆಯಲ್ಲಿ ದೇಶ ಸಾಕಷ್ಟು ಸಾಧನೆ ಮಾಡಿದೆ. ಆದರೆ, ಇಂದಿಗೂ ರೈತರ ಆದಾಯ ಮತ್ತು ಜೀವನ ಮಟ್ಟ ಸುಧಾರಣೆ ಆಗಿಲ್ಲ. ರೈತರ ಪ್ರಮುಖ ಸಮಸ್ಯೆಗೆ ಪರಿಹಾರ ದೊರೆತಿಲ್ಲ’ ಎಂದರು.
‘ರೈತರಿಗೆ ಕಡಿಮೆ ಬೆಲೆಗೆ ಪರಿಕರಗಳನ್ನು ನೀಡಬೇಕು. ಕೃಷಿ ಉತ್ಪನ್ನಗಳು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಗ್ರಾಹಕರಿಗೆ ಸಿಗುವಂತಾಗಬೇಕು. ನಬಾರ್ಡ್‌ನಲ್ಲಿ ರೈತ ಉತ್ಪಾದಕರ ಕಂಪನಿಗಳಿಗೆ ₹ 20 ಲಕ್ಷದಿಂದ ₹ 30 ಲಕ್ಷದವರೆಗೆ ಸಹಾಯಧನ ಸಿಗುತ್ತದೆ. ಇದನ್ನು ರೈತರು ಬಳಸಿಕೊಳ್ಳಬೇಕು. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಆಕಾಶವಾಣಿ ಮೈಸೂರು ಉಪ ನಿರ್ದೇಶಕ ಎಸ್.ಎಸ್. ಉಮೇಶ್ ಮಾತನಾಡಿ, ‘ನಾಗನಹಳ್ಳಿ ಕೃಷಿ ಕೇಂದ್ರದ ಸಹಯೋಗದಲ್ಲಿ ‘ನಮ್‌ಕಂಪನಿ’ ವಿಶೇಷ ಬಾನುಲಿ ಸರಣಿ 25 ವಾರ ಪ್ರಸಾರವಾಗಲಿದೆ’ ಎಂದು ತಿಳಿಸಿದರು.
ಕೊಡಗು ವಿವಿ ಕುಲಪತಿ ಅಶೋಕ್ ಆಲೂರು ಆನ್‌ಲೈನ್‌ನಲ್ಲಿ ಆಶಯ ಭಾಷಣ ಮಾಡಿದರು. ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣಾ ಸಿಂಗ್, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಎಂ.ಎಸ್.ಸಪ್ನಾ, ನಬಾರ್ಡ್ ಮಂಡ್ಯ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹರ್ಷಿತಾ ಬಿ.ವಿ., ಆಕಾಶವಾಣಿ ಕೃಷಿರಂಗ ಕಾರ್ಯಕ್ರಮ ನಿರ್ವಾಹಕ ಕೇಶವಮೂರ್ತಿ ಎನ್., ವಿಕಸನ ಸಂಸ್ಥೆ ಗೌರವ ಅಧ್ಯಕ್ಷ ಆರ್.ಎಲ್.ಜಗದೀಶ್, ಪುಷ್ಪಾದೇವಿ, ಕುಮಾರ್, ಸುಭದ್ರಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.