ADVERTISEMENT

ತವಿಲ್‌, ಮೃದಂಗದೊಂದಿಗೆ ‘ರಾಗಾಭಿಷೇಕ’

ವಾಣಿವಿಲಾಸ ಮೊಹಲ್ಲಾ 8ನೇ ಕ್ರಾಸ್‌: ಅಭಿಷೇಕ್‌ ರಘುರಾಂರ ಗಾಯನ ಮೋಡಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 17:45 IST
Last Updated 6 ಸೆಪ್ಟೆಂಬರ್ 2022, 17:45 IST
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಸೋಮವಾರ ವಿದ್ವಾನ್‌ ಅಭಿಷೇಕ್‌ ರಘುರಾಂ ಗಾಯನ ಲಹರಿ. ಮೃದಂಗದಲ್ಲಿ ಅನಂತ ಆರ್‌.ಕೃಷ್ಣನ್‌, ‘ವಯಲಿನ್‌’ನಲ್ಲಿ ವಿದ್ವಾನ್‌ ಎಚ್‌.ಎನ್‌.ಭಾಸ್ಕರ್‌ ಸಾಥ್‌ ನೀಡಿದರು
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಸೋಮವಾರ ವಿದ್ವಾನ್‌ ಅಭಿಷೇಕ್‌ ರಘುರಾಂ ಗಾಯನ ಲಹರಿ. ಮೃದಂಗದಲ್ಲಿ ಅನಂತ ಆರ್‌.ಕೃಷ್ಣನ್‌, ‘ವಯಲಿನ್‌’ನಲ್ಲಿ ವಿದ್ವಾನ್‌ ಎಚ್‌.ಎನ್‌.ಭಾಸ್ಕರ್‌ ಸಾಥ್‌ ನೀಡಿದರು   

ಮೈಸೂರು: ಕರ್ನಾಟಕ ಸಂಗೀತದ ‘ಪಕ್ಕವಾದ್ಯ’ಗಳಾದ ‘ಮೃದಂಗ’ ಹಾಗೂ ‘ತವಿಲ್‌’ಗಳ ಜುಗಲ್‌ಬಂದಿಯಲ್ಲಿ ಪುರಂದರ ದಾಸ, ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ್‌ ಸೇರಿದಂತೆ ವಾಗ್ಗೇಯಕಾರರ ಕೃತಿಗಳನ್ನು ಅಭಿಷೇಕ್‌ ರಘುರಾಂ ಹೂ ಬಿರಿಯುವಂತೆ ಅರಳಿಸಿದ ಪರಿಗೆ ಸಂಗೀತ ಪ್ರಿಯರು ತಲೆದೂಗಿದರು.

ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಸೋಮವಾರ ಅಭಿಷೇಕ್‌ ಗಾಯನವು ‘ರಾಗಾಭಿಷೇಕ’ದಲ್ಲಿ ಮೀಯುವಂತೆ ಮಾಡಿತು.

‘ಈಶ ಮನೋಹರಿ’ ರಾಗದಮುತ್ತುಸ್ವಾಮಿ ದೀಕ್ಷಿತರ ಕೃತಿ ‘ಶ್ರೀ ಗಣನಾಥಂ ಭಜರೇ’ಯೊಂದಿಗೆ ಅಭಿಷೇಕ್‌ ಕಛೇರಿಯನ್ನು ಆರಂಭಿಸಿದರು. ‘ಮೃದಂಗ’ದಲ್ಲಿ ವಿದ್ವಾನ್‌ ಅನಂತ ಆರ್‌.ಕೃಷ್ಣನ್‌ ಹಾಗೂ ‘ತವಿಲ್‌’ನಲ್ಲಿ ವಿದ್ವಾನ್‌ ಮನ್ನಾರ್‌ಗುಡಿ ವಾಸುದೇವನ್‌ ಸಾಥ್‌ ನೀಡಿದರು.

ADVERTISEMENT

ಗಾಯನದೊಂದಿಗೆ ತಾಳವಾದ್ಯಗಳಲ್ಲೂ ಅತೀವ ಆಸಕ್ತಿಯಿರುವ ಅಭಿಷೇಕ್‌, ಪಕ್ಕವಾದ್ಯಕಾರರ ಜುಗಲ್‌ಬಂದಿಗೂ ‘ಕಾಲ’ವನ್ನು ನೀಡುತ್ತಿದ್ದದ್ದು ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸಿತು.‘ವಯಲಿನ್‌’ನಲ್ಲಿ ವಿದ್ವಾನ್‌ ಎಚ್‌.ಎನ್‌.ಭಾಸ್ಕರ್‌ ರಾಗದ ನಡೆಗಳನ್ನು ಅನುಸರಿಸಿದರು. ಭಾವ ತೀವ್ರತೆಗೊಳಿಸುವ ಕಾಲಾವಕಾಶ ಸಿಕ್ಕಾಗಲೆಲ್ಲ ‘ಪ್ರತಿಭೆ’ಯನ್ನು ತೋರಿದರು.

‘ದರ್ಬಾರ್‌’ ರಾಗದ ತ್ಯಾಗರಾಜರ ಕೃತಿ ‘ಮುಂದು ವೆನುಕಾ ಇರು’, ‘ಹಮೀರ್‌ ಕಲ್ಯಾಣಿ’ ರಾಗದ ಪುರಂದರ ದಾಸರ ‘ಶರಣು ಸಿದ್ದಿ ವಿನಾಯಕ’ ಕೃತಿಯನ್ನು ಹಾಡಿದರು. ನಂತರ ‘ಮಾಳವಿ’, ‘ತೋಡಿ’ ರಾಗ ತಾನ ‍ಪಲ್ಲವಿಯನ್ನು ಪ್ರಸ್ತುತಪಡಿಸಿದರು. ಅಭಿಷೇಕ್‌ ನಾಲ್ಕು ಗಂಟೆಗಳ ಕಛೇರಿ ನೀಡಿದರು.

ಅದಕ್ಕೂ ಮುನ್ನ ಧನ್ಯಾ ಹಾಗೂ ಶ್ರೀನಿವಾಸ ಫಣಿ ಅವರು ‘ಕಂದರ್ಪ ಹರನಿಂದ ಬೆಂದುದು’ ಕಾವ್ಯವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.