ADVERTISEMENT

ಕಾವೇರಿ ಸೀಮೆಯನ್ನು ಜೋಡಿಸಿದ ಯಾತ್ರೆ | ಸಾಂಸ್ಕೃತಿಕ ನಗರಿಯಲ್ಲಿ ರಾಹುಲ್ ‘ಹವಾ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 9:19 IST
Last Updated 3 ಅಕ್ಟೋಬರ್ 2022, 9:19 IST
   

ಮೈಸೂರು: ಮೊಳಗಿದ ‘ಜೋಡೊ ಜೋಡೊ ಭಾರತ್‌ ಜೋಡೊ’ ಘೋಷಣೆ, ಹಾರಾಡಿದ ಕಾಂಗ್ರೆಸ್‌ ಬಾವುಟಗಳು, ನಾಯಕರ ಫ್ಲೆಕ್ಸ್‌–ಕಟೌಟ್‌ಗಳ ಭರಾಟೆ, ಸಾವಿರಾರು ಕಾರ್ಯಕರ್ತರು ಭಾಗಿ, ಸಾಂಸ್ಕೃತಿಕ ನಗರಿಯಲ್ಲಿ ರಾಹುಲ್‌ ಹವಾ. ಮಸೀದಿ, ಚರ್ಚ್ ಹಾಗೂ ಮಂದಿರಕ್ಕೆ ಭೇಟಿ. ವಿಶೇಷ ಪ್ರಾರ್ಥನೆ.

– ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ’ ಯಾತ್ರೆಯು ನಗರದಲ್ಲಿ ಸಂಚರಿಸಿದಾಗ ಕಂಡುಬಂದ ವಿಶೇಷಗಳಿವು. ವಿವಿಧ ಜನಪದ ಕಲಾತಂಡಗಳು ಮೆರುಗು ಹೆಚ್ಚಿಸಿದವು. ಅಲ್ಲಲ್ಲಿ ಸಮಾಜದ ವಿವಿಧ ವರ್ಗದವರಿಗೆ ರಾಹುಲ್‌ ಜೊತೆಯಲ್ಲಿ ನಡೆಯುವುದಕ್ಕೆ ಪಕ್ಷದವರು ಅವಕಾಶ ಮಾಡಿಕೊಡುತ್ತಿದ್ದರು. ಹೀಗೆ ಅವಕಾಶ ಪಡೆದವರು ಫೋಟೊ ತೆಗೆಸಿಕೊಂಡು ಪುಳಕ ಅನುಭವಿಸಿದರು. ಯುವಕರು, ವಿದ್ಯಾರ್ಥಿನಿಯರು, ಕಾರ್ಯಕರ್ತರು ಹಾಗೂ ಮುಖಂಡರು ನಾಯಕರೊಂದಿಗೆ ಮೊದಲ ಸಾಲಿನಲ್ಲಿ ಸಾಗಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಭಾಗವಾಗಿ ರಾಜ್ಯದಲ್ಲಿ ನಾಲ್ಕನೇ ದಿನವಾದ ಸೋಮವಾರ ಕಾವೇರಿ ಸೀಮೆಯನ್ನು ಕಾರ್ಯಕರ್ತರು ನಡಿಗೆಯೊಂದಿಗೆ ಜೋಡಿಸಿದರು. ಜಿಲ್ಲೆಯ ನಂಜನಗೂಡು ತಾಲ್ಲೂಕಿನಿಂದ ಬಂದು ಇಲ್ಲಿ ತಂಗಿದ್ದ ಯಾತ್ರೆಯು ಸೋಮವಾರ ಬೆಳಿಗ್ಗೆ 6.20ರ ಸುಮಾರಿಗೆ ಹಾರ್ಡಿಂಜ್‌ ವೃತ್ತದಿಂದ ಪ್ರಾರಂಭಗೊಂಡಿತು. ಜಯಚಾಮರಾಜೇಂದ್ರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಮುಖಂಡರು, ಅಶೋಕ ರಸ್ತೆಯಲ್ಲಿ ಹೆಜ್ಜೆ ಹಾಕಿದರು. ಮಾರ್ಗ ಮಧ್ಯದಲ್ಲಿ ಹಾಸಮ್ ಮಸೀದಿಗೆ ತೆರಳಿದ ರಾಹುಲ್‌ ಅವರನ್ನು ಅಲ್ಲಿನ ಮುಖಂಡರು ಸಂಭ್ರಮದಿಂದ ಬರಮಾಡಿಕೊಂಡರು.

ADVERTISEMENT

ಬಳಿಕ ವಿಶ್ವವಿಖ್ಯಾತ ಸಂತ ಫಿಲೋಮಿನಾ ಚರ್ಚ್‌ಗೆ ಭೇಟಿ ನೀಡಿದ ರಾಹುಲ್, ಅದರ ವಾಸ್ತುಶಿಲ್ಪಕ್ಕೆ ಮಾರು ಹೋದರು. ಅಲ್ಲಿಂದ, ಅಶೋಕ ರಸ್ತೆಯಲ್ಲಿ ಸಾಗಿದ ಯಾತ್ರೆಯು ಫೌಂಟೇನ್‌ ವೃತ್ತ–ಎಲ್‌ಐಸಿ ವೃತ್ತದ ಮೂಲಕ ಬನ್ನಿಂಟಪ ಮುಖ್ಯ ರಸ್ತೆ ತಲುಪಿತು. ಜೆಎಸ್‌ಎಸ್‌ ವೈದ್ಯಕೀಯ ಕಾಲೇಜುಗಳ ಎದುರಿನ ರಸ್ತೆಯಲ್ಲಿ ಸಾಗಿ ಮಣಿಪಾಲ್‌ ಆಸ್ಪತ್ರೆಯ ಮುಂದೆ ಹಾದು ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಲುಪಿತು. ಮಣಿಪಾಲ್ ಆಸ್ಪತ್ರೆಯ ಎದುರು ಮುಸ್ಲಿಂ, ಕ್ರೈಸ್ತ ಸಮಾಜದ ಮುಖಂಡರು ಮತ್ತು ಪ್ರತಿನಿಧಿಗಳು ರಾಹುಲ್‌ಗೆ ಹೂವು ನೀಡಿ ಸ್ವಾಗತ ಕೋರಿದರು.

ಕೆ.ಆರ್.ಮಿಲ್ ಕಾಲೊನಿ, ಸಿದ್ದಲಿಂಗಪುರ, ನಾಗನಹಳ್ಳಿ ಗೇಟ್ ಮೂಲಕ ಕಳಸ್ತವಾಡಿ ಗೇಟ್‌ ಬಳಿ ಮಂಡ್ಯ ಜಿಲ್ಲೆಯನ್ನು ಯಾತ್ರೆಯು ಪ್ರವೇಶಿಸಿತು. ಮಾರ್ಗ ಮಧ್ಯದಲ್ಲಿ ರಾಹುಲ್ ಮತ್ತು ನಾಯಕರು ನಾಗನಹಳ್ಳಿ ಗೇಟ್‌ನಲ್ಲಿರುವ ‘ಕಸ್ತೂರಿ ನಿವಾಸ’ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದರು. ಯಾತ್ರಿಗಳು ಶ್ರೀರಂಗಪಟ್ಟಣದ ಪರಿವರ್ತನ ಶಾಲೆಯವರೆಗೂ ನಡೆದು ವಿಶ್ರಾಂತಿ ಪಡೆದರು. ಉಪಾಹಾರದ ನಂತರ ಪಾದಯಾತ್ರೆ ಮುಂದುವರಿಸಿದ ರಾಹುಲ್ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಸಹ ಯಾತ್ರಿಕರನ್ನು ಕೂಡಿಕೊಂಡರು.

ಬಳಿಕ ವಾಹನದಲ್ಲಿ ಮರಳಿದ ಅವರು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನದ ನಂತರ ವಾಹನದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿಗೆ ತೆರಳಿ ಪಾದಯಾತ್ರೆ ಮುಂದುವರಿಸಿದರು.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಮುಖಂಡರಾದ ಪಿ.ಚಿದಂಬರಂ, ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಶಾಸಕರಾದ ಕೃಷ್ಣ ಭೈರೇಗೌಡ, ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಎಚ್‌.ಪಿ.ಮಂಜುನಾಥ್, ಲಕ್ಷ್ಮಿ ಹೆಬ್ಬಾಳಕರ, ಸಲೀಂ ಅಹಮದ್, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮೊದಲಾದವರು ಹೆಜ್ಜೆ ಹಾಕಿದರು. ಮಂಡ್ಯ ಜಿಲ್ಲೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಕೂಡಿಕೊಂಡರು, ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.