ADVERTISEMENT

ಸಿಡಿಲಿನ ಅಬ್ಬರದೊಂದಿಗೆ ಮಳೆ

ಕೊಳವೆಬಾವಿಯಲ್ಲಿ ನೀರು ಹೆಚ್ಚಬಹುದು ಎಂಬ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:26 IST
Last Updated 13 ಮೇ 2019, 20:26 IST

ಮೈಸೂರು: ನಗರದಲ್ಲಿ ಸೋಮವಾರ ರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸಾಧಾರಣ ಮಳೆ ಸುರಿಯಿತು.

ಗಾಳಿಯೊಂದಿಗೆ ಬಿದ್ದ ಮಳೆಯು ಇಳೆಯನ್ನು ತಂಪಾಗಿಸಿತು. ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನೆರೆಯಿತು.

ಮಳೆಯು ತಾಲ್ಲೂಕಿನ ಕೆಲವೆಡೆ ಬಿದ್ದಿದೆ. ಎಲ್ಲೆಲ್ಲಿ ಕೊಳವೆಬಾವಿ ಮೂಲದಿಂದ ಕುಡಿಯುವ ನೀರು ಪೂರೈಕೆಯಾಗುತ್ತದೋ ಅಂತಹ
ಕಡೆ ನಿವಾಸಿಗಳಿಗೆ ಮಳೆಯು
ಹರ್ಷವನ್ನು ತಂದಿದೆ. ಕೊಳವೆಬಾವಿಯಲ್ಲಿ ನೀರು ಹೆಚ್ಚಬಹುದು, ಕುಡಿಯುವ ನೀರಿನ ಬವಣೆ ನೀಗಬಹುದು ಎಂಬ ನಿರೀಕ್ಷೆ ಅವರಲ್ಲಿ ಗರಿಗೆದರಿದೆ.

ಸದ್ಯ, ಬಿದ್ದಿರುವ ಮಳೆಯು ಬಿತ್ತನೆಯಾಗಿರುವ ಬೆಳೆಗಳಿಗೆ ಜೀವಕಲೆಯನ್ನು ತಂದಿದೆ. ತೋಟಗಾರಿಕಾ ಬೆಳೆಗಳೂ ನಳನಳಿಸುವಂತಾಗಿದೆ. ಇನ್ನಷ್ಟು ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಮಳೆಯಿಂದ ಹೆಚ್ಚಿನ ಅನಾಹುತ ಆಗಿಲ್ಲ. ಕುವೆಂಪುನಗರದ ಕುವೆಂಪು ಶಾಲೆಯ ಬಳಿ ಜೋರಾಗಿ ಬೀಸಿದ ಗಾಳಿಗೆ ಮರದ ರೆಂಬೆಯೊಂದು ವಿದ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.

ಅಶೋಕಪುರಂ, ತ್ರಿವೇಣಿ ವೃತ್ತ ಹಾಗೂ ಸೂಯೆಜ್‌ಫಾರಂನಲ್ಲಿ ಒಳಚರಂಡಿ ನೀರು ರಸ್ತೆಯಲ್ಲೆಲ್ಲ
ಹರಿದು ನಾಗರಿಕರಿಗೆ ತೊಂದರೆ
ಉಂಟು ಮಾಡಿತು. ಪಾಲಿಕೆಯ ಅಭಯ್ ರಕ್ಷಣಾ ತಂಡ ಇಲ್ಲಿ ಕಾರ್ಯಚರಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.