ADVERTISEMENT

ಮೈಸೂರು ಭಾಗದಲ್ಲಿ ಮತ್ತೆ ತಂಪೆರೆದ ಮಳೆ‌ | ಅರಸೀಕೆರೆ, ಹನೂರಿನಲ್ಲಿ ಆಲಿಕಲ್ಲು ಮಳೆ

​ಪ್ರಜಾವಾಣಿ ವಾರ್ತೆ
Published 7 ಮೇ 2024, 13:40 IST
Last Updated 7 ಮೇ 2024, 13:40 IST
ಮೈಸೂರಿನಲ್ಲಿ ಮಂಗಳವಾರ ಮುಂಜಾನೆ ಜೆ.ಎಲ್.ಬಿ ರಸ್ತೆಯಲ್ಲಿ ಮಳೆಯ ನಡುವೆಯೇ ವಾಹನ ಸವಾರರು ಸಾಗಿದ ರೀತಿ
–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನಲ್ಲಿ ಮಂಗಳವಾರ ಮುಂಜಾನೆ ಜೆ.ಎಲ್.ಬಿ ರಸ್ತೆಯಲ್ಲಿ ಮಳೆಯ ನಡುವೆಯೇ ವಾಹನ ಸವಾರರು ಸಾಗಿದ ರೀತಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಕೊಡಗಿನಲ್ಲಿ ಮಂಗಳವಾರ ಮುಂಜಾನೆ ಹಾಗೂ ಹಾಸನದಲ್ಲಿ ಸಂಜೆ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಉತ್ತಮ ಮಳೆಯಾಯಿತು. ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ವಿವಿಧೆಡೆ ಆಲಿಕಲ್ಲು ಮಳೆಯೂ ಸುರಿಯಿತು.

ಮೈಸೂರಿನಲ್ಲಿ ಜಿಲ್ಲಾ ಕೇಂದ್ರದ ಸಹಿತ ವಿವಿಧ ತಾಲ್ಲೂಕುಗಳಲ್ಲಿ ಮುಂಜಾನೆ 2 ಗಂಟೆಯ ಸಮಯದಲ್ಲಿ ಜೋರು ಮಳೆಯಾಯಿತು. ಆರಂಭದಲ್ಲಿ ಬಿರುಗಾಳಿ ಸಹಿತ ಮಳೆಯಾದರೆ ಬಳಿಕ ಶಾಂತವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಜನರಿಗೆ ಸಂತಸ ನೀಡಿತು. ಕೊಂಚ ವಿರಾಮದ ಬಳಿಕ 3 ಗಂಟೆಗೆ ಮತ್ತೆ ಜೋರು ಮಳೆಯಾಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವಾರದೊಳಗೆ ಸುರಿದ ಎರಡನೇ ಮಳೆ ತುಸು ನೆಮ್ಮದಿ ತಂದಿದೆ.

ಹಾಸನ ನಗರವೂ ಸೇರಿದಂತೆ ಜಿಲ್ಲೆಯ ಹೊಳೆನರಸೀಪುರ, ಅರಸೀಕೆರೆ, ಹಳೇಬೀಡು, ಜಾವಗಲ್‌, ಬಾಣಾವರ, ಆಲೂರಿನಲ್ಲಿ ಮುಕ್ಕಾಲು ಗಂಟೆಗೂ ಹೆಚ್ಚು ಉತ್ತಮ ಮಳೆಯಾಯಿತು.

ADVERTISEMENT

ಚಾಮರಾಜನಗರ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧೆಡೆ ರಾತ್ರಿ 2 ಗಂಟೆಯ ನಂತರ ಉತ್ತಮ ಮಳೆಯಾಯಿತು. ಅಲ್ಲಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 1.51 ಸೆಂ.ಮೀ ಮಳೆಯಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 2.23 ಸೆಂ.ಮೀ ಮಳೆ ಸುರಿದಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಗುಡುಗು, ಸಿಡಿಲು ಹೆಚ್ಚಿತ್ತು. ಮಳೆ ಕಡಿಮೆ ಇತ್ತು.

ಮಂಡ್ಯ ನಗರದ ಕೆ.ವಿ.ಶಂಕರಗೌಡ ರಸ್ತೆಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಮರದ ಬೃಹತ್ ಕೊಂಬೆ ಕಾರಿನ ಮೇಲೆ ಮುರಿದು ಬಿದ್ದು, ತಾಲ್ಲೂಕಿನ ಜಿ.ಬೊಮ್ಮನಹಳ್ಳಿಯ ಕಾರ್ತಿಕ್ (27) ಮೃತಪಟ್ಟು, ಅವರ ಸ್ನೇಹಿತರಾದ ಸುನೀಲ್, ಮಂಜು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಂಬ –ಪ್ರತಿಬಿಂಬ... ಮೈಸೂರಿನಲ್ಲಿ ಮುಂಜಾನೆ ಚಾಮರಾಜ ವೃತ್ತದಲ್ಲಿ ವಿದ್ಯುತ್‌ ದೀಪಾಲಂಕಾರವು ಮಳೆ ನೀರಿನಲ್ಲಿ ಪ್ರತಿಫಲಿಸಿದ್ದು ಹೀಗೆ... ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.